ಪುತ್ತೂರು: ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಎಸ್.ಡಿ.ಪಿ.ಐ ಪಕ್ಷದ ಪುತ್ತೂರು ನಗರದ ಮಾಜಿ ಅಧ್ಯಕ್ಷನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪುತ್ತೂರು ಪ್ರಧಾನ ಸಿವಿಲ್ ನ್ಯಾಯಾಲಯ ಹಿರಿಯ ವಿಭಾಗ ಮತ್ತು ಎ ಸಿ ಜೆ ಎಮ್ ನ್ಯಾಯಾಧೀಶರು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಎಸ್ ಡಿ ಪಿ ಐ ಪಕ್ಷದ ಪುತ್ತೂರು ನಗರದ ಮಾಜಿ ಅಧ್ಯಕ್ಷ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಪೈಸಾರಿ ನಿವಾಸಿ ಅಬ್ದುಲ್ ಬಶೀರ್ ಇಬ್ರಾಹಿಂ ಎನ್ನಲಾಗಿದೆ.
ಬನ್ನೂರು ನಿವಾಸಿ ಬಿ ಮಹಮ್ಮದ್ ಹನೀಫ್ ಎಂಬವರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ಕೊಡುವುದಾಗಿ ಹೇಳಿ ರೂ.38,50,000 ಹಣ ಪಡೆದು ಲಾಭಾಂಶ ನೀಡದೇ, ಸಂಪರ್ಕಕ್ಕೂ ಸಿಗದೇ ಅಬ್ದುಲ್ ಬಶೀರ್ ಇಬ್ರಾಹಿಂ ರವರು ವಂಚಿಸಿದ್ದಾರೆ ಎಂದು ಹನೀಫ್ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆ.
ವಂಚನೆಗೊಳಗಾದ ವ್ಯಕ್ತಿಯ ಖಾಸಗಿ ದೂರಿನ ವಾದ ಮಂಡನೆ ಆಲಿಸಿದ ನ್ಯಾಯಾಲಯ ಆರೋಪಿ ಅಬ್ದುಲ್ ಬಶೀರ್ ಇಬ್ರಾಹಿಂ ರವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲು ಪುತ್ತೂರು ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದೆ.
ದೂರುದಾರ ಹನೀಫ್ ರವರ ಪರವಾಗಿ ಎಚ್ & ಡಿ ಲೀಗಲ್‌ನ ನ್ಯಾಯವಾದಿಗಳಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೊಳುವಾರು, ಬಬಿತಾ ಬಂಗೇರ, ಅಕ್ಷತಾ ಬನಾರಿ ವಾದಿಸಿದರು.