ಕಲ್ಲಡ್ಕ: ಪರಿಸರವು ನಮಗೆ ದೇವರು ನೀಡಿರುವ ಒಂದು ಸುಂದರ ವರದಾನವಾಗಿದೆ. ಪರಿಸರದ ಮಾಲಿನ್ಯವು ಬಹುಪಾಲು ಮನುಷ್ಯರಿಂದಲೇ ಆಗುತ್ತದೆ .ಈತನ ಕಾರಣದಿಂದಾಗಿ ಮಾತ್ರ ಪರಿಸರ ಹಾಳಾಗಿ ಬರಡಾಗುತ್ತದೆ. ನಮ್ಮ ಪರಿಸರ ನಮ್ಮ ಜವಾಬ್ದಾರಿ ಅರಣ್ಯ ರಕ್ಷಣೆ ನಮ್ಮ ಹೊಣೆ ಅದರ ಕಾಳಜಿಯನ್ನು ಮಾಡಿದರೆ ಮಾತ್ರ ನಮಗೆ ಜೀವನ ಇದೆ. ನಾವೂ ಬದುಕಬೇಕು ಅದನ್ನು ಬದುಕಲು ಬಿಡಬೇಕು ಪರಿಸರದ ಬಗ್ಗೆ ಪ್ರೀತಿ ಕಾಳಜಿಯನ್ನು ಹೊಂದಿರಬೇಕು ಎಂದು ಬಂಟ್ವಾಳ ಅರಣ್ಯ ವಲಯಾಧಿಕಾರಿ ರಾಜೇಶ್ ಬಳಿಗಾರ್ ರವರು ಮಜಿ ವೀರಕಂಭ ಶಾಲೆಯಲ್ಲಿ ಪೋಷಕರ ಮತ್ತು ಎಸ್.ಡಿ.ಎಂ.ಸಿ.ಸದಸ್ಯ ರ ಮೂರನೇ ಹಂತದ ತರಬೇತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮೊದಲು ಶಾಲಾ ತೋಟದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಮಜಿ ವೀರಕಂಭ ಶಾಲೆಯು ಈ ವರ್ಷ ಶಾಲಾ ಶತಮಾನೋತ್ಸವ ಆಚರಿಸುತ್ತಿರುವುದರಿಂದ ಕಾಯ೯ಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಶಾಲಾ ಶತಮಾನೋತ್ಸವದ ನೆನಪಿಗಾಗಿ ಒಂದೊಂದು ಗಿಡವನ್ನು ನೀಡುವ ಉದ್ದೇಶ ಇದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ಮನವಿ ಮಾಡಿದಾಗ ಕೂಡಲೇ ಸ್ಪಂದಿಸಿದ ವಲಯ ಅರಣ್ಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬೇಕಾದಷ್ಟು ಸಸಿಗಳನ್ನು ಉಡುಗೊರೆಯಾಗಿ ನೀಡಿ ವೀರಕಂಭ ಗ್ರಾಮದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸುವ ಪ್ರಯತ್ನಕ್ಕೆ ತನ್ನ ಇಲಾಖೆ ವತಿಯಿಂದ ಪೂರ್ಣ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ವೀರಕಂಭ ಗ್ರಾಮ ವಲಯ ಅರಣ್ಯ ಸಮಿತಿಯ ಅಧ್ಯಕ್ಷ ಹಾಗೂ ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ರವರು ಅರಣ್ಯ ನಮ್ಮ ಸಂಪತ್ತು ನಮ್ಮ ಸ್ವತ್ತು ಎಂದು ಭಾವಿಸಿ ತೊಂದರೆಯಾಗದಂತೆ ರಕ್ಷಣೆ ಮಾಡುವುದು ಬೆಂಕಿ ಬಿದ್ದರೆ ತಕ್ಷಣವೇ ತಿಳಿಸುವುದು ಮತ್ತು ಕಾಯ೯ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ ರವರು ಮಕ್ಕಳಲ್ಲಿ ಪರಿಸರದ ಕಾಳಜಿ ಮೂಡಿಸುವ ಮೂಲಕ ಆ ಬಗ್ಗೆ ಜವಾಬ್ದಾರಿಯನ್ನು ಹೊಂದುವಂತೆ ಎಳ ವಯಸ್ಸಿನಲ್ಲಿಯೇ ಮಾಡಿದಾಗ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.
.
ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯೆ ಜಯಂತಿ, ಮೀನಾಕ್ಷಿ, ಸ.ಪ್ರೌ.ಶಾಲೆ ಗೋಳ್ತಮಜಲಿನ ಮುಖ್ಯ ಶಿಕ್ಷಕಿ ವಿದ್ಯಾಲತಾ, ಶಿಕ್ಷಕರಾದ ನಾರಾಯಣಗೌಡ,ಗೋಳ್ತಮಜಲಿನ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರ್ ಟೈಲರ್, ವೀರಕಂಭ ವಲಯ ಅರಣ್ಯ ರಕ್ಷಕರಾದ ಶೋಭಿತ್ ಕುಮಾರ್, ಶಾಲಾ ನಾಯಕಿ ಶ್ರೇಯ ಉಪಸ್ಥಿತರಿದ್ದರು.
ಕಾಯ೯ಕ್ರಮದ ಬಳಿಕ ಶಿಕ್ಷಕಿಯವರಾದ ಮುಷಿ೯ದಾಬಾನು ಮತ್ತು ಸಂಗೀತ ಶಮ೯ರವರು ಎಸ್.ಡಿ.ಎಂ.ಸಿ. ಸದಸ್ಯರಿಗೆ ಮತ್ತು ಪೋಷಕರಿಗೆ ಮೂರನೇ ಹಂತದ ತರಬೇತಿ ನೀಡಿದರು.
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಮುಷಿ೯ದಾಬಾನು ವಂದಿಸಿ, ಶಿಕ್ಷಕಿ ಸಂಗೀತ ಶಮ೯ ಕಾಯ೯ಕ್ರಮ ನಿರ್ವಹಿಸಿದರು.