ಬೆಳಗಾವಿ: ಕೇರಳದ ಕುಖ್ಯಾತ ರೌಡಿ ಡಾನ್ ತಸ್ಲಿಮ್ ಕೊಲೆ ಪ್ರಕರಣದ ಆರೋಪಿ ಗುರುರಾಜ್ ದೊಡ್ಡಮನಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಗುರುರಾಜ್ ಸಾವಿಗೆ ಜೈಲು ಸಿಬ್ಬಂದಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 2019ರಲ್ಲಿ ಕೇರಳದ ಕುಖ್ಯಾತ ರೌಡಿ ಡಾನ್ ತಸ್ಲಿಮ್ನ ಕೊಲೆ ಕೇಸ್ನಲ್ಲಿ ಗುರುರಾಜ್ ದೊಡ್ಡಮನಿ ಜೈಲುಪಾಲಾಗಿದ್ದ. ಕಳೆದ ನಾಲ್ಕು ದಿನಗಳಿಂದ ಗುರುರಾಜ್ಗೆ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈ ಬಗ್ಗೆ ಗುರುರಾಜ್ ತನ್ನ ಸಂಬಂಧಿಯೊಬ್ಬರಿಗೆ ಶುಕ್ರವಾರ ತಿಳಿಸಿ 500 ರೂ. ಕೊಡುವಂತೆ ಹೇಳಿದ್ದನಂತೆ. ಇದಾದ ಕೆಲವೇ ಗಂಟೆಗಳಲ್ಲಿ ಅಂದರೆ ಶುಕ್ರವಾರ ಸಂಜೆ ಗುರುರಾಜ್ ಮೃತಪಟ್ಟಿದ್ದಾನೆ ಎಂದು ಜೈಲಿನಿಂದ ಸಂಬಂಧಿಕರಿಗೆ ಕರೆ ಬಂದಿತ್ತು.
15 ದಿನಗಳ ಹಿಂದೆ ಗುರುರಾಜ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿತ್ತು. ಇದಾದ ಬಳಿಕ ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಮೃತನ ಸಹೋದರ ಕಿರಣ್ ಆರೋಪಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ ಎನ್ನಲಾಗಿದೆ.