ಪುತ್ತೂರು: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವಿಟ್ಲದ ವಿಠಲ್ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಟೆನ್ನಿಕಾಯಿಟ್ ಸ್ಫರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳಾದ ಅನನ್ಯ ಭಟ್(ಬಂಟ್ವಾಳ ತಾಲೂಕಿನ ಕೆದಿಲದ ಗಣೇಶ ಭಟ್ ಮತ್ತು ಸೌಮ್ಯಲಕ್ಷ್ಮಿ ದಂಪತಿಗಳ ಪುತ್ರಿ) ಮತ್ತು ಎಂ. ಎಸ್ ದೀಪಾಲಿ(ಬಂಟ್ವಾಳ ತಾಲೂಕಿನ ಬುಡೋಳಿಯ ಸುಂದರಗೌಡ ಮತ್ತು ಶಾಲಿನಿ ದಂಪತಿಗಳ ಪುತ್ರಿ) ಅವರು ಈ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.