ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಸಂಬಂಧಿಸಿ ದೇವಳದ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕ ಸಭೆಯು ಮಾ.೧೪ ರಂದು ದೇವಳದ ನಟರಾಜ ವೇದಿಕೆಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನೂತನ ವ್ಯವಸ್ಥಾಪನಾ ಸಮಿತಿ ಹಾಕಿದ ಯೋಜನೆಯನ್ನು ಹಂತ ಹಂತವಾಗಿ ಮಾಡಬೇಕು ಮತ್ತು ಹಾಕಿದ ಯೋಜನೆ ಅವರ ಅವಧಿಯಲ್ಲಿ ಮುಗಿಯಬೇಕೆಂದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ದೇವಳದ ಸಮಗ್ರ ಅಭಿವೃದ್ದಿಗೆ ತಕ್ಕಂತೆ ೧೯ ವಿವಿಧ ಯೋಜನೆಗಳನ್ನು ಪಿಪಿಟಿ ಮೂಲಕ ಸಾರ್ವಜನಿಕರಿಗೆ ವಿವರಿಸಿದರು. ಬಳಿಕ ಸಾರ್ವಜನಿಕರ ಸಲಹೆ ಸ್ವೀಕರಿಸಿ ಮಾತನಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ಡಾ.ಸುಧಾ ಎಸ್ ರಾವ್, ರಾಮದಾಸ್ ಗೌಡ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ಪ್ರಧಾನ ಅರ್ಚಕ ವಿ ಎಸ್ ಭಟ್, ಶೇಖರ್ ನಾರಾವಿ, ಐತ್ತಪ್ಪ ನಾಯ್ಕ್, ವೀಣಾ, ರವೀಂದ್ರನಾಥ ರೈ ಬಳ್ಳಮಜಲು, ಜಿಲ್ಲಾ ಧಾರ್ಮಿಕ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಾರ್ವಜನಿಕರು ಸಲಹೆ ಸೂಚನೆ ನೀಡಿದರು. ಸದಸ್ಯ ರಾಮದಾಸ ಗೌಡ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ.ಸುಧಾ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ದೂರದರ್ಶಿತ್ವದ ಯೋಜನೆ: ವ್ಯವಸ್ಥಾಪನಾ ಸಮಿತಿಯು ಮುಂದಿನ 50 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿರಿಸಿ ದೂರದರ್ಶಿತ್ವದ ಯೋಜನೆಯನ್ನು ಸಿದ್ದಪಡಿಸಿದೆ. ಈಗಾಗಲೇ ನೀಲನಕಾಶೆ ಸಿದ್ದವಾಗಿದೆ. ಹಂತ ಹಂತಗಳಲ್ಲಿ ಮೂರು ವರ್ಷಗಳ ಅವಧಿಯೊಳಗೆ ಮಾಸ್ಟರ್ ಪ್ಲಾನ್ ಅನುಷ್ಟಾನಗೊಳ್ಳಲಿದೆ. ಇದಕ್ಕೆ ಕೇವಲ ಸರ್ಕಾರದ ಅನುದಾನವಲ್ಲದೆ ಇತರ ನಿಧಿಗಳು ಮತ್ತು ದಾನಿಗಳ ನೆರವನ್ನು ಪಡೆಯಲಾಗುವುದು. ದೇವಳದ ಒಟ್ಟು 14 ಎಕ್ಕ ಜಾಗದ ಸುತ್ತು ನಡೆದಾಟಲು ಪೂಟ್ ಪಾತ್ ಮಾಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗುವುದು ಎಂದರು.
ಕೆರೆ ಅಭಿವೃದ್ಧಿಗೆ ರೂ.40 ಲಕ್ಷ ಬಳಕೆ: ಪುತ್ತೂರು ಪುಡಾದಿಂದ ದೇವಳದ ಪುಷ್ಕರಣಿಯನ್ನು ಅಭಿವೃದ್ಧಿಗೊಳಿಸಲು ರೂ.40 ಲಕ್ಷ ಮಂಜೂರುಗೊಳಿಸಲಾಗಿದೆ.ಪ್ರವಾಸೆದ್ಯಮ ಇಲಾಖಾ ವ್ಯಾಪ್ತಿಗೆ ಮಹಾಲಿಂಗೇಶ್ವರ ದೇವಸ್ಥಾನ ಸೇರ್ಪಡೆಗೊಳಿಸಿರುವುದರಿಂದ ಯಾತ್ರಿನಿವಾಸ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯ ಅನುದಾನ ಕೂಡಾ ಲಭ್ಯವಾಗಲಿದೆ ಎಂದು ಶಾಸಶರು ಮಾಹಿತಿ ನೀಡಿದರು. ಕಾರ್ಯಕ್ರಮದ ಆಯೋಜಕರಿಗೆ ಸ್ವಚ್ಛತೆ ಹೊಣೆ: ದೇವಳದ ಗದ್ದೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದ ಬಳಿಕ ಸ್ವಚ್ಛತೆ ಮಾಡಬೇಕು.ದೇವಳದ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜಕರೇ ಇದರ ಹೊಣೆ ಹೊರಬೇಕೆಂದು ಶಾಸಕರು ಹೇಳಿದರು. ಪಾವಿತ್ರ್ಯತೆ ಪದಕ್ಕೆ ಆದ್ಯತೆ : ದೇವಳದಲ್ಲಿ ವ್ಯವಸ್ಥಾಪನಾ ಸಮಿತಿ ಬದಲು ಮೊಕ್ತಸರ, ಆಡಳಿತ ಮೊಕ್ತಸರ ಎಂಬ ಪದ ಬಳಕೆ ಇರಬೇಕು. ಈ ಪದಕ್ಕೆ ಮಹತ್ವವಿದೆ ಎಂದು ಹಿರಿಯರಾದ ಕಿಟ್ಟಣ್ಣ ಗೌಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿ ಉತ್ತರಿಸಿದ ಶಾಸಕರು, ಪಾವಿತ್ರ್ಯತೆ ಬರುವ ಪದಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಚಿವರಲ್ಲಿ ಮಾತುಕತೆ ನಡೆಸುತ್ತೇನೆ ಎಂದರು.
ಸಮಗ್ರ ಅಭಿವೃದ್ಧಿಗೆ ಚಿಂತನೆ: ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಮೂಲಭೂತ ಸೌಕರ್ಯಗಳ
ಸಹಿತ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಿ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರಲ್ಲದೆ ಸೈಡ್ ಶೋ ಮೂಲಕ ವಿವರಣೆ ನೀಡಿದರು. ಈಗಾಗಲೇ
ಅಭಿವೃದ್ಧಿ ಕುರಿತು ಕೆಲವು ಪ್ಲಾನ್‌ಗಳು ಅರ್ಧದಲ್ಲಿರುವುದರಿಂದ ಅದನ್ನು ನಾವು ತಕ್ಷಣ ಟೇಕ್ ಅಪ್ ಮಾಡುತ್ತಿದ್ದೇವೆ ಎಂದ ಅವರು, ಈ ಒಟ್ಟು ಯೋಜನೆಗೆ ಸಲಹೆ ಸೂಚನೆ ಪಡೆದು ಮತ್ತೆ
ಸಂಪೂರ್ಣ ಕರಡು ಪ್ರತಿಯನ್ನಾಗಿ ಮಾಡಿ ಮುಂದೆ ಬರುವ ಸಮಿತಿಗಳು ಇದನ್ನೇ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿ ಮಾಡುವ ಯೋಜನೆ ಹಾಕಿದೆ ಎಂದರು. ಮೇ 13ಕ್ಕೆ ಅನ್ನಪೂರ್ಣ ಮಹಾಸ್ತೋತ್ರ: ದೇವಳದಲ್ಲಿ ಅನ್ನಪೂರ್ಣ ಮಹಾಸ್ತೋತ್ರ ಯೋಜನೆ ಹಾಕಿಕೊಂಡಿದ್ದು ಸೀಮೆಯ ಎಲ್ಲಾ ಭಕ್ತರ ಮನೆಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ. ಮೇ 13ರಂದು ಶ್ರೀ ದೇವರ ಪುನರ್‌ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಅನ್ನಪೂರ್ಣ ಹವನ ನಡೆಯಲಿದೆ.ಭಕ್ತರು ಮೇ8ರಿಂದ ಪ್ರತಿದಿನ ಮನೆಯಲ್ಲಿ ಬೊಗಸೆ ಅಕ್ಕಿ ಮತ್ತು ಕಾಣಿಕೆ ತೆಗೆದು ದೇವರ ಫೋಟೋದ ಮುಂದಿಟ್ಟು ಅನ್ನಪೂರ್ಣ ಸ್ತೋತ್ರ ಪಠಿಸುವುದು. 5 ದಿವಸ ಈ ಸೋತ್ರ ನಿರಂತರ ಪಠಿಸಿ ಮl 3ಕ್ಕೆ ಬೊಗಸೆ ಅಕ್ಕಿಯನ್ನು ದೇವಸ್ಥಾನಕ್ಕೆ ತಂದು ಒಪ್ಪಿಸುವುದು. ಈ ಸಂದರ್ಭದಲ್ಲಿ ದೇವಳದಿಂದ ವಿಶೇಷ ಪ್ರಸಾದವನ್ನು ನೀಡಲಾಗುವುದು ಎಂದು ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮಚಂದ್ರ ಕಾಮತ್ ಮಾಹಿತಿ ನೀಡಿದರು.
ಅಕ್ಟೋಬರ್ 19ರಿಂದ ಅತಿರುದ್ರಯಾಗ: ಶ್ರೀ ದೇವಳದಲ್ಲಿ ಸಾನಿಧ್ಯ ವೃದ್ಧಿಗಾಗಿ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಶ್ರೀ ದೇವರ ಸಾನಿಧ್ಯ ವೃದ್ಧಿಗಾಗಿ ಇದೇ ಪ್ರಥಮ ಬಾರಿಯಾಗಿ ಶ್ರೀ ದೇವಸ್ಥಾನದ ಗದ್ದೆಯಲ್ಲಿ 6 ದಿನಗಳ ಕಾಲ ಅತಿರುದ್ದ ಮಹಾಯಾಗ ನಡೆಯಲಿದೆ. ಅಕ್ಟೋಬರ್ 19ರಿಂದ 24ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. 121 ಕುಂಡಗಳು, 160 ಯತಿಗಳ ನೇತೃತ್ವದಲ್ಲಿ ಈ ಅತಿರುದ್ರ ಯಾಗ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ನಾರಾವಿ ತಿಳಿಸಿದರು. ಭಕ್ತರ ಸಲಹೆಗಳು: ದೇವಳಕ್ಕೆ ಸೋಲಾರ್ ಸಿಸ್ಟಮ್ಅಳವಡಿಸುವಂತೆ ಪ್ರಸ್ತಾಪಿಸಿದರು.ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ ಅವರು ದೇವಳಕ್ಕೆ ಬರುವ ದಾರಿ ಆಗಲವಾಗಬೇಕು.ಯಾತ್ರಿಕರ ವಾಹನ ಪಾರ್ಕ್‌ಗೆ ಸೂಚನಾ ಫಲಕ, ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮ ಜೊಡಿಸುವಂತೆ ತಿಳಿಸಿದರು. ಅಶ್ವತ್ಥಕಟ್ಟೆಯ ಸುತ್ತು ಆವರಣಗೋಡೆ ಮಾಡುವಂತೆ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ತಿಳಿಸಿದರು.
ಶಾರದಾ ಭಜನಾ ಮಂದಿರ, ರಕ್ತಶ್ವರಿ ಗುಡಿಯ ಬಳಿ ಸಿಸಿ ಕ್ಯಾಮರಾ, ಪಂಚಾಕ್ಷರಿ ಮಂಟಪವನ್ನು ಗೋಶಾಲೆ ಮಾಡಿ, ರಂಗ ಮಂದಿರ ನಿರ್ಮಿಸಿ ಎಂದು ರಾಧಾಕೃಷ್ಣ ಗೌಡ ನಂದಿಲ ಅವರು ಪ್ರಸ್ತಾಪಿಸಿದರು.ರೋಟರಿ ಕ್ಲಬ್‌ನ ಭರತ್ಅವರು ದೇವಳದ ಪಕ್ಕದ ತೋಡಿಗೆ ಚೆಕ್ ಡ್ಯಾಮ್ ಮಾಡುವಂತೆ ಪ್ರಸ್ತಾಪಿಸಿದರು. ಧಾರ್ಮಿಕ ಗ್ರಂಥಗಳ ಗ್ರಂಥಾಲಯ, ಗದ್ದೆಯಲ್ಲಿ ಕಸದ ರಾಶಿ ಹಾಕದಂತೆ ಸೂಚನೆ ನೀಡಬೇಕು ಎಂದು ಹರಿಣಿ ಪುತ್ತೂರಾಯ ಪ್ರಸ್ತಾಪಿಸಿದರು.ನೈರ್ಮಲ್ಯ ಕಾಪಾಡುವುದು, ಈಶ್ವರ ಸ್ಮರಣೆಯ ಮಂತ್ರ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸುದರ್ಶನ್ ಮುರ ತಿಳಿಸಿದರು. ಅಭಿವೃದ್ಧಿ ಯೋಜನೆ ಹಂತ ಹಂತವಾಗಿ ಕೈಗೊಳ್ಳುವಂತೆ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧುನರಿಯೂರು ತಿಳಿಸಿದರು.ಯೋಜನೆ ಖುಷಿಯಾಗಿದೆ ಮೂರು ವರ್ಷದಲ್ಲಿ ಈ ಯೋಜನೆ ಮಾಡಲು ಆಗುತ್ತದೆಯೋ ಎಂದು ಚಿಂತಿಸಿ, ಮೊದಲು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಎಂಬ ಪದ ಬದಲಾಯಿಸಿ ಹಿಂದಿರುವ ಆಡಳಿತ ಮೊಕ್ತಸರ, ಮೊಕ್ತಸರ ಪದ ಮತ್ತೆ ಚಾಲ್ತಿಗೆ ತರಬೇಕು.ಒಳಗಿನ ನಿಷ್ಠೆಯಿಂದ ಮಾತ್ರ ಸಾನಿಧ್ಯ ಹೆಚ್ಚುತ್ತದೆ ಎಂಬುದನ್ನು ಅರಿತು ಒಳಗಿನ ವ್ಯವಸ್ಥೆಯನ್ನು ಮೊದಲು ಸು ಮಾಡುವಂತ ಹಿರಿಯರಾದ ಕಿಟ್ಟಣ್ಣ ಗೌಡ ಹೇಳಿದರು.ನಟರಾಜ ವೇದಿಕೆ, ಸಭಾಭವನ ದುರಸ್ತಿ ಕುರಿತು ಮಾಜಿ ಮೊಕ್ತಸರ ರಮೇಶ್ ಬಾಬು ಪ್ರಸ್ತಾಪಿಸಿದರು.ದೇವಸ್ಥಾನದ ವೆಬ್‌ಸೈಟ್ ಆಪ್‌ಡೇಟ್ ಮಾಡುವಂತೆ ಸುಧೀರ್ ಶೆಟ್ಟಿ ಪ್ರಸ್ತಾಪಿಸಿದರು.ದೇವಳದ ಗದ್ದೆಯಲ್ಲಿ ಅನಧಿಕೃತ ವಾಹನ ಪಾರ್ಕ್‌ನ್ನು ನಿಲ್ಲಿಸಬೇಕು ಎಂದು ನಾಗೇಶ್ ಭಟ್ ಪ್ರಸ್ತಾಪಿಸಿದರು. ದಯಾನಂದ ಅವರು ದೇವಳದಲ್ಲಿ ಗ್ರಂಥಾಲಯ ಮಾಡುವಂತೆ ಪ್ರಸ್ತಾಪಿಸಿದರು.