ಪ್ರತಿಷ್ಠಿತ ಜಾಗತಿಕ ಸಂಸ್ಥೆಯಾಗಿರುವ ಇನ್ಫೋಸಿಸ್ ತನ್ನ ಆನ್ಲೈನ್ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಮೂಲಕ 3000ಕ್ಕೂ ಹೆಚ್ಚು ಕೋರ್ಸುಗಳನ್ನು ಉಚಿತವಾಗಿ ಕಲಿಯುವ ಅವಕಾಶವನ್ನು ನೀಡಿದ್ದು, ಈಗಾಗಲೇ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ವಿದ್ಯಾರ್ಥಿಗಳು ಈ ವೇದಿಕೆಯನ್ನು ಉಪಯೋಗಿಸಿಕೊಂಡು ರಾಜ್ಯದಲ್ಲಿ ಅತ್ಯಧಿಕ ಕೋರ್ಸುಗಳನ್ನು ಮಾಡಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೀಗ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ವೇದಿಕೆಯು ಜನವರಿ ತಿಂಗಳಿನಲ್ಲಿ ಅತ್ಯಧಿಕ ಕೋರ್ಸುಗಳನ್ನು ಮುಗಿಸಿರುವ ರಾಷ್ಟ್ರೀಯ ಮಟ್ಟದ ಟಾಪ್ ಟೆನ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಬೆಟ್ಟಂಪಾಡಿ ಕಾಲೇಜಿನ ಎರಡು ವಿದ್ಯಾರ್ಥಿನಿಯರು ಸ್ಥಾನವನ್ನು ಪಡೆದಿರುತ್ತಾರೆ.
ದೇಶಾದ್ಯಂತ 1.1 ಮಿಲಿಯನ್ ಗೂ ಅಧಿಕ ವಿದ್ಯಾರ್ಥಿಗಳು ಈ ವೇದಿಕೆಯನ್ನು ಬಳಸಿಕೊಂಡಿದ್ದು ಕಾಲೇಜಿನಲ್ಲಿ ದ್ವಿತೀಯ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾದ ಕು. ಶೃತಿ ಸಿ ಇವರು ಈ ವೇದಿಕೆಯಲ್ಲಿ ನೂರಕ್ಕೂ ಅಧಿಕ ಕೋರ್ಸುಗಳನ್ನು ಪೂರ್ಣಗೊಳಿಸಿ 1900 ಅಂಕಗಳನ್ನು ಪಡೆಯುವುದರ ಮೂಲಕ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ.
ದ್ವಿತೀಯ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿರುವ ಇನ್ನೋರ್ವ ವಿದ್ಯಾರ್ಥಿನಿಯಾದ ಕು. ತೇಜಸ್ವಿನಿ ಪಿ. ಎಂ ಇವರು 50ಕ್ಕೂ ಅಧಿಕ ಕೋರ್ಸುಗಳನ್ನು ಪೂರ್ಣಗೊಳಿಸಿ 1200 ಅಂಕಗಳನ್ನು ಪಡೆಯುವುದರ ಮೂಲಕ ಒಂಬತ್ತನೇ ಸ್ಥಾನವನ್ನು ಪಡೆದಿರುತ್ತಾರೆ. ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರಾದ ದೀಕ್ಷಿತ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಆನ್ಲೈನ್ ಕೋರ್ಸುಗಳನ್ನು ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಶೇಷ ಸಾಧನೆಯನ್ನು ಮಾಡಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸಿದೆ.