ನವದೆಹಲಿ: ಹಿಂದೂ ಸಮಾಜ ಯಾರ ವಿರೋಧಿಯೂ ಅಲ್ಲ, ಯಾರನ್ನೂ ದ್ವೇಷಿಸುವುದಿಲ್ಲ ಆದರೆ ಅವರ ವಿರುದ್ದ ನಿಲ್ಲುವ ಶಕ್ತಿ ಯಾರಿಗೂ ಇಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಿಶ್ವದಾದ್ಯಂತ ಹಿಂದೂಗಳನ್ನು ನಾಶ ಮಾಡಲು ಶತಮಾನದಿಂದ ಪ್ರಯತ್ನಿಸಿದವರು ತಮ್ಮಲ್ಲೇ ಜಗಳವಾಡುತ್ತಿದ್ದಾರೆ. ನಮ್ಮನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾಯಿತು. ಆದರೆ ಅದರಲ್ಲಿ ಗೆಲುವು ಸಿಕ್ಕಿಲ್ಲ. ಇಂದಿಗೂ ಭಾರತದ ಸನಾತನ ಧಾರ್ಮಿಕ ಜೀವನವನ್ನು ಯಥಾಸ್ಥಿತಿಯಲ್ಲಿ ಕಾಣಬಹುದು. ಇಷ್ಟೆಲ್ಲಾ ದೌರ್ಜನ್ಯಗಳ ನಡುವೆಯೂ ನಮ್ಮಲ್ಲಿ ಮಂತ್ರ ಭೂಮಿ ಇದೆ ಎಂದರು.
ಇನ್ನು ಹಿಂದೂ ಧರ್ಮ ಶತಮಾನಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದು, ಪ್ರಗತಿ ಸಾಧಿಸಿದೆ. ಜಾತಿ, ಧರ್ಮ, ಭಾಷೆಗಿಂತಲೂ ಮಿಗಿಲಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಬೇಕು, ಹಿಂದೂ ಹಿತ ಅಂದರೆ ರಾಷ್ಟ್ರಹಿತ. ಈ ಮೂಲಕ ಬಲಿಷ್ಠ ಹಾಗೂ ಸಮರ್ಥ ರಾಷ್ಟ್ರವಾಗಲು ಸಾಧ್ಯ ಎಂದಿದ್ದಾರೆ.
ದೇಶದಲ್ಲಿ ಆಡಳಿತ, ರಾಜಕೀಯ ನಡೆಸುತ್ತಿರುವವರಲ್ಲಿ ಹೆಚ್ಚಿನವರು ಹಿಂದೂಗಳು. ಇಂದಿಗೂ ದೇಶದಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತದೆ. ನಮ್ಮ ಸಂಪ್ರದಾಯಗಳು ನಮಗೆ ಕಲಿಸಿದ್ದು ಶಾಶ್ವತವಾಗಿದೆ ಎಂದು ಹೇಳಿದ್ದಾರೆ.
ಭಾರತವು ಹಿಂದೂ ರಾಷ್ಟ್ರವಾಗುವ ಹಾದಿಯನ್ನು ಅನುಸರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಇದು ಹಿಂದೂ ರಾಷ್ಟ್ರ. ಸಂಘವು ಜನರನ್ನು ವಿಭಜಿಸುವುದಿಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ.