ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.೧೦ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.೧೭ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.೧೫ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ. ಬೆಳಿಗ್ಗೆ ಶುಭ ಮೂಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ರಥಕ್ಕೆ ಪ್ರದಕ್ಷಿಣೆ ಬಂದು ತೆಂಗಿನ ಕಾಯಿ ಒಡೆಯುವ ಮೂಲಕ ಬ್ರಹ್ಮರಥವನ್ನು ಮಂದಿರದಿಂದ ಹೊರಗೆ ತರಲು ಚಾಲನೆ ನೀಡಿದರು. ಬಳಿಕ ದೇವಳದ ವಾಸ್ತು ಇಂಜಿನಿಯರ್ ಆಗಿರುವ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಆರಂಭದಲ್ಲಿ ರಥದ ಹಿಂಬದಿಯ ಚಕ್ರಕ್ಕೆ ದಂಡೆ ಇಟ್ಟು ಚಕ್ರಕ್ಕೆ ಚಾಲನೆ ನೀಡಲಾಯಿತು.
ಬ್ರಹ್ಮರಥವನ್ನು ಕ್ರೈನ್ ಸಹಾಯದಿಂದ ಹೊರಗೆಳೆಯುವ ಕೆಲಸ ನಿರ್ವಹಿಸಲಾಯಿತು. ದೇವಾಲಯದ ಕೆಲಸಗಾರರು ಸೇರಿ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಶೇಖರನಾರಾವಿ, ಬಿ. ಐತ್ತಪ್ಪ ನಾಯ್ಕ್, ಬಿ.ಕೆ. ವೀಣಾ, ರಾಮ್ದಾಸ್ ಗೌಡ, ದೇವಾಲಯದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಕಚೇರಿ ಸಹಾಯಕ ಪದ್ಮನಾಭ, ನಿತ್ಯ ಕರಸೇವೆಕ ಕಿರಣ್ಶಂಕರ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.
ರಥ ಕಟ್ಟುವ ಸ್ಥಳ ಸೂಚನೆ ನೀಡಿದ ಬಿಲ್ವಪತ್ರೆ ಪ್ರತಿ ವರ್ಷ ಬ್ರಹ್ಮರಥವನ್ನು ರಥ ಬೀದಿಗೆ ತಂದು ರಥಕಟ್ಟುವ ಸ್ಥಳವನ್ನು ರಥಕ್ಕೆ ಅರ್ಪಣೆ ಮಡಿದ ಬಿಲ್ವಪತ್ರೆ ಭೂಮಿ ಸ್ಪರ್ಶದ ಮೂಲಕ ಸೂಚಿಸುತ್ತದೆ. ಈ ವರ್ಷವೂ ದೇವಳದ ಬಳಿಯ ನಾಗ ಸನ್ನಿಧಿಯ ಮುಗುಳಿಗೆ ಸರಿಯಾಗಿ ರಥದಲ್ಲಿದ್ದ ಬಿಲ್ವಪತ್ರೆ ಮತ್ತು ಗಂಧ ಪ್ರಸಾದ ಭೂಮಿಯನ್ನು ಸ್ಪರ್ಶ ಮಾಡುವ ಮೂಲಕ ರಥ ನಿಲ್ಲಿಸುವ ಸೂಚನೆ ನೀಡಿದೆ. ಬ್ರಹ್ಮರಥವನ್ನು ಆರಂಭದಲ್ಲಿ ಎದುರು ತಂದು ಮತ್ತೆ ಹಿಂದಕ್ಕೆ ತಂದು ನೇರ ನಿಲ್ಲಿಸಲು ಮುಂದೆ ತಂದಾಗ ಬಿಲ್ವ ಪತ್ರೆ ಭೂಮಿ ಸ್ಮರ್ಶ ಮಾಡಿದೆ.