ನವದೆಹಲಿ: ವಿವಾದಿತ ಹಿಜಾಬ್- ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಬರುವವರೆಗೂ ಶಾಲೆ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಉಡುಪು ಧರಿಸುವಂತಿಲ್ಲ ಎಂಬ ಹೈಕೋರ್ಟ್ ನ ಮಧ್ಯಂತರ ಮೌಖಿಕ ಸೂಚನೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಧ್ಯಂತರ ಆದೇಶವು ವ್ಯಕ್ತಿಗಳ, ವಿಶೇಷವಾಗಿ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಆತ್ಮಸಾಕ್ಷಿಯ ಆಯ್ಕೆಯನ್ನು ಪ್ರಶ್ನಿಸಿದೆ ಎಂದು ಅರ್ಜಿದಾರರ ವಿದ್ಯಾರ್ಥಿ ಹೇಳಿದರು. ಮುಸ್ಲಿಂ ಮಹಿಳೆಯರ ವೃತ್ತಿ ಮತ್ತು ಭವಿಷ್ಯವು ಅತಂತ್ರದಲ್ಲಿದೆ, ಅವರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. ತ್ರಿಸದಸ್ಯ ಪೀಠದ ಮುಂದೆ ನಡೆಯುತ್ತಿರುವ ವಿಚಾರಣೆಗಳು ಹಾಗೂ ಹಿಜಾಬ್ ಸಮಸ್ಯೆಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನ ನಿರ್ದೇಶನಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಶಾಲಾ-ಕಾಲೇಜುಗಳಲ್ಲಿ ಯಾರೊಬ್ಬರೂ ಧಾರ್ಮಿಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ನ್ಯಾಯಪೀಠ ಗುರುವಾರ ಮೌಖೀಕ ಸೂಚನೆ ನೀಡಿದೆ.
ಅಷ್ಟೇ ಅಲ್ಲದೆ, ಶಾಲಾ ಕಾಲೇಜುಗಳನ್ನು ತೆರೆಯಿರಿ ಎಂದು ನಿರ್ದೆಶನ ನೀಡಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ನ್ಯಾಯಪೀಠ ಸದ್ಯ ರಾಜ್ಯದಲ್ಲಿ ಶಾಂತಿ- ಸುವ್ಯವಸ್ಥೆ ನೆಲೆಸಬೇಕಿದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಆರಂಭವಾಗಲಿ. ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಧಾರ್ಮಿಕ ಉಡುಗೆ ಧರಿಸಲು ವಿದ್ಯಾರ್ಥಿಗಳನ್ನು ಒತ್ತಾಯಿಸಬಾರದು ಎಂದು ಮಧ್ಯಂತರ ಆದೇಶ ನೀಡುವುದಾಗಿ ಹೇಳಿತು.
ಗುರುವಾರ ಕರ್ನಾಟಕದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ನಿರಾಕರಿಸಿತ್ತು. “ಮೊದಲು ಕರ್ನಾಟಕ ಹೈಕೋರ್ಟ್ ನಿರ್ಧರಿಸಲಿ, ಆಮೇಲೆ ನೋಡೋಣ’ ಎಂದು ಸ್ಪಷ್ಟಪಡಿಸಿತ್ತು. ಸಿ.ಜೆ.ಐ. ಎನ್.ವಿ.ರಮಣ ನೇತೃತ್ವದ ನ್ಯಾಯ ಪೀಠದ ಮುಂದೆ ಗುರುವಾರ ನ್ಯಾಯವಾದಿ ಕಪಿಲ್ ಸಿಬಲ್ ಕರ್ನಾಟಕದ ಪ್ರಕರಣವನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದರು. ಈ ಅರಿಕೆಗೆ ಉತ್ತರಿಸಿದ ನ್ಯಾಯಪೀಠ ಮೊದಲು ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ಪೂರ್ತಿಗೊಳ್ಳಲಿ. ನಾವಿಲ್ಲಿ ಅದನ್ನು ಪರಿಗಣಿಸಿದರೆ ಹೈಕೋರ್ಟ್ ವಿಚಾರಣೆ ನಡೆಸದೆ ಇರಬಹುದು. ಇಷ್ಟು ಬೇಗ ಮಧ್ಯಪ್ರವೇಶ ಬೇಡ. ನಂತರ ಈ ಬಗ್ಗೆ ತೀರ್ಮಾನಿಸೋಣ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಇದೀಗ ಹೈಕೋರ್ಟ್ ನ ಮೌಖಿಕ ಸೂಚನೆಯನ್ನು ಪ್ರಶ್ನಿಸಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ.



























