ಪುತ್ತೂರು: ಪುಸ್ತಕಗಳು ಕೇವಲ ಗ್ರಂಥಾಲಯದಲ್ಲಿ ಮಾತ್ರ ಲಭ್ಯವಾಗುವುದಲ್ಲ. ಪ್ರತಿಯೊಂದು ಮನೆಯಲ್ಲೂ ಕೂಡಾ ಪುಸ್ತಕ ಇರಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮೂರು ದಿನಗಳು ನಡೆಯುವ ರಾಜ್ಯಮಟ್ಟದ ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯುಮಾನಗಳಿಂದ ಬರಹಗಾರರ ಸಂಖ್ಯೆ ಕಡಿಮೆ ಆಗಿಲ್ಲ, ಲೇಖಕ ಲೇಖಕಿಯರು ಸಿಗುತ್ತಾರೆ. ಆದರೆ ಇವರನ್ನು ಪ್ರೋತ್ಸಾಹಿಸುವುದು ಕೇವಲ ಸಭೆ ಸಮಾರಂಭದಲ್ಲಿ ಚಪ್ಪಾಳೆಗಳ ಮೂಲಕ ಮಾತ್ರ ಸಾಕಾಗುವುದಿಲ್ಲ. ಅವರು ಬರೆದಿರುವ ಪುಸ್ತಕಗಳನ್ನು ಕೊಂಡು ಕೊಂಡು ಓದಿ ವಿಮರ್ಶೆ ಮಾಡಿ ಹತ್ತು ಜನರಿಗೆ ಅದರ ಸಂದೇಶ ತಲುಪವಂತೆ ಮಾಡುವಂತಹದ್ದು ನಮ್ಮಲ್ಲೆರ ಆದ್ಯ ಕರ್ತವ್ಯ ಮತ್ತು ನೈತಿಕ ಹೊಣೆಗಾರಿಕೆ ಆಗಿದೆ. ಈ ನಿಟ್ಟಿನಲ್ಲಿ ಪುಸ್ತಕಗಳು ಕೇವಲ ಗ್ರಂಥಾಲಯದಲ್ಲಿ ಮಾತ್ರವಲ್ಲ ಪ್ರತಿಯೊಂದು ಮನೆಯಲ್ಲೂ ಇರಬೇಕೆಂದು ಹೇಳಿದರು. ಪುಸ್ತಕ ಕೊಂಡು ಕೊಳ್ಳಬೇಕು. ನಾವು ಓದದಿದ್ದರೂ ಇನ್ನೊಬ್ಬರು ಓದುಗರಿಗೆ ಕೊಡುವ ಕೆಲಸ ಮಾಡಬೇಕು. ಪುಸ್ತಕದ ವಿಸ್ತರಣೆ ಕೂಡಾ ಆಗಬೇಕು. ಪ್ರಸಾರಂಗ ಕೂಡಾ ಆಗಬೇಕು. ಬದಲಾದ ಸಮಯ ಸನ್ನಿವೇಶದಲ್ಲಿ ಆನ್‌ಲೈನ್‌ನಲ್ಲಿ ಮಾರಾಟವ ಕೆಲಸಕ್ಕೆ ವಿಶ್ಸವಿದ್ಯಾಲಯ ಕೈ ಹಾಕಿದೆ. ಪ್ರತಿ ಸಮಾರಂಭದಲ್ಲಿ ಮೊಮೆಂಟೋ ಕೊಡುವ ಬದಲು ಪುಸ್ತಕ ಕೊಡಿ ಎಂದ ಅವರು ನಮ್ಮಲ್ಲಿನ ಸಾಮಾರ್ಥ್ಯ, ಇಚ್ಚಶಕ್ತಿ, ಅವಕಾಶ ಸಮಾಗಮ ಆದಾಗ ಒಳ್ಳೆಯ ಕೃತಿ ನೀಡಬಹುದು ಎಂದರು.
ಅಧ್ಯಯನ ಶೀಲ ಪ್ರವೃತಿ ಬೆಳೆಸಿಕೊಳ್ಳಿ: ದ.ಕ.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್ ಪ್ರದೀಪ ಕುಮಾರ್ ಕಲ್ಕೂರ ಅವರು ಮಾತನಾಡಿ ಶೈಕ್ಷಣಿಕ ವರ್ಷದಲ್ಲಿ ಇಂಗ್ಲೀಷ್ ಬಂದಿದೆ ಎಂದು ಆತಂಕ ಪಡಬೇಕಾಗಿಲ್ಲ. ಅದು ಶೈಕ್ಷಣಿಕ ವ್ಯವಸ್ಥೆಯ ಒಂದು ಭಾಗ. ಶಾಸ್ತ್ರೀ ಸುಳ್ಳಾಗಬಹುದು, ಶಾಸ್ತ್ರ ಸುಳ್ಳಾಗದೆಂಬ ಮಾತಿನಂತೆ ಅಧ್ಯಾಯನ ಶೀಲತೆ ಕೊರತೆಯಿಂದಾಗಿ ಶಾಸ್ತ್ರದ ಒಳಗಿನ ಸಂಪೂರ್ಣ ಶಕ್ತಿಯನ್ನು ಸಂಪಾದಿಸಿಲ್ಲ ಎಂದಾದರೆ ನಾವು ಪುಸ್ತಕ ಓದಿಲ್ಲ ಎಂದರ್ಥ. ಶಾಸ್ತ್ರದ ಅನುಭವ ನಮ್ಮದಾಗಬೇಕಾದರೆ ನಾವು ಅಧ್ಯಾಯನ ಶೀಲ ಪ್ರವೃತಿ ಬೆಳೆಸಬೇಕು ಎಂದರು. ದುರದೃಷ್ಟ ಎಂದರೆ ಇವತ್ತು ಓದುವ ಪ್ರಕ್ರಿಯೆ, ಜ್ಞಾನವನ್ನು ಅನುಭವದೊಂದಿಗೆ ಪಡೆಯುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಮುಖರಾಗಿ ಶಾಸ್ತ್ರವೇ ಶಸ್ತ್ರವಾದ ಪ್ರಮೇಯವನ್ನು ನಾವು ನೋಡಿದ್ದೇವೆ. ಹಾಗೆ ಆಗಬಾರದು. ಪುಸ್ತಕ ಓದುವ ಪ್ರಕ್ರಿಯೆ ಮಾಡಬೇಕು. ಆಗ ಜ್ಞಾನ ವರ್ಧನೆಯ ಜೊತೆಗೆ ಜೀವನದ ವರ್ಧನೆಯನ್ನು ಆಗುತ್ತದೆ. ಕೃಷಿಮೇಳ, ಆಹಾರ ಮೇಳದಂತೆ ಪುಸ್ತಕ ಮೇಳದಲ್ಲಿ ನಮ್ಮಿಂದ ಸಾಧ್ಯವಾಷ್ಟು ಪುಸ್ತಕಗಳನ್ನು ಕೊಂಡುಕೊಳ್ಳೋಣ ಎಂದರು.
ಶಿಕ್ಷಕರ ಸಾಹಿತ್ಯ ಸಮ್ಮೇಳನಕ್ಕೆ ಚಿಂತನೆ: ಧಾರ್ಮಿಕ ಗ್ರಂಥಾಲಯವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಶಿಕ್ಷಕಿ ಹರಿಣಾಕ್ಷಿ ಕಕ್ಕೆಪದವು ಅವರ ‘ತಾಯಿನುಡಿ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನದ ಇಕ್ಕಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದಾರೆ. ತಂತ್ರಜ್ಞಾನವನ್ನು ತಮ್ಮ ಅಗತ್ಯಕ್ಕೆ ತಕ್ಕಷ್ಟೆ ಬಳಸಬೇಕು. ಉಳಿದಂತೆ ಇ ಬುಕ್ಸ್‌ಗಳನ್ನು ಬಳಸಿಕೊಳ್ಳಲು ತಂತ್ರಜ್ಞಾನ ಬಳಸಿಕೊಳ್ಳಬಹುದು ಎಂದ ಅವರು ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ನಡುವೆ ಮಕ್ಕಳ ಸಾಹಿತ್ಯ ಸಮ್ಮೇಳ ನಡೆದಿದೆ. ಅನೇಕ ಕೃತಿಗಳು ಹೊರಬಂದಿವೆ. ಅದೇ ರೀತಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಶಿಕ್ಷಕರಲ್ಲಿ ತುಂಬಾಪ್ರತಿಭೆಗಳಿವೆ. ಹಾಗಾಗಿ ಶಿಕ್ಷಕರ ಸಾಹಿತ್ಯ ಸಮ್ಮೇಳನವನ್ನು ಮಾಡುವ ಕುರಿತು ಚಿಂತನೆ ಮಾಡಿದ್ದೇವೆ. ಈ ಕುರಿತು ಸಾಹಿತ್ಯ ಪರಿಷತ್ತು ಮತ್ತು ಸಾರ್ವಜನಿಕರು ಸಹಕಾರ ಕೋರಿದರು.
ದೇವಳದ ವತಿಯಿಂದ ಧಾರ್ಮಿಕ ಶಿಕ್ಷಣ ಚಿಂತನೆ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ದೇವಸ್ಥಾನಕ್ಕೂ ಪುಸ್ತಕ ಮೇಳಕ್ಕೂ ಬಹಳ ಹತ್ತಿರ ಸಂಬಂಧವಿದೆ. ಅದು ಹೇಗೆಂದರೆ ಸಾಮಾಜಿಕವಾಗಿ ದೇವಾಸ್ಥಾನಗಳು ತೊಡಗಿಕೊಂಡಾಗ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ದೇವಸ್ಥಾನ ಭಜನಾ ಮಂದಿರಗಳು ಭಜನೆ ಮೂಲಕ ಧಾರ್ಮಿಕ ಮನೋಭಾವ ಮೂಡಿಸುತ್ತದೆ. ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡುವ ಚಿಂತನೆಯನ್ನು ಮುಂದಿನ ದಿನಗಳಲ್ಲಿ ಮಾಡುವ ಚಿಂತನೆ ಇದೆ ಎಂದರು.
ಪುಸ್ತಕ ಜ್ಞಾನ ದೀಪ ಬೆಳಗುವುದು: ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ಪುಸ್ತಕ ಓದುವ ಸಂದರ್ಭದಲ್ಲಿ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಪುಸ್ತಕಕ್ಕೆ ದೇಶ, ಭಾಷೆ, ಜಾತಿಗೆ ಸೀಮಿತವಾಗಿಲ್ಲ. ಮನುಕುಲಕ್ಕೆ ಜ್ಞಾನ ದೀಪ ಬೆಳಗುವುದು ಪುಸ್ತಕ ಎಂದರು. ಪುಸ್ತಕ ಜೀವನ ಪರಿಯಂತ ಪ್ರತಿಫಲ ನೀಡುತ್ತದೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಪ್ರಸ್ತುತ ದಿನದಲ್ಲಿ ಒತ್ತಡದಿಂದ ಯಾರಿಗೂ ಸಮಯ ಇಲ್ಲ. ಆದರೆ ಸಮಯ ಮಾಡಿ ಪುಸ್ತಕ ಓದಿ. ಯಾಕೆಂರೆ ಪುಸ್ತಕ ಜೀವನ ಪರಿಯಂತ ಪ್ರತಿಫಲ ನೀಡುತ್ತದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ| ಹೆಚ್.ಜಿ. ಶ್ರೀಧರ್ ಸ್ವಾಗತಿಸಿ, ಉಮೇಶ್ ನಾಯಕ್ ವಂದಿಸಿದರು. ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ತೆಂಕಿಲ ವಿವೇಕಾನಂದ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಅಪರಾಹ್ನ ಸಂತ ಫಿಲೋಮಿನಾ ಕಾಲೇಜಿನ ಲಲಿತ ಕಲಾ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಪರಾಹ್ನ ಡಾ.ಶೋಭಿತಾ ಸತೀಶ್ ಬಳಗದವರಿಂದ ಸುಗಮ ಸಂಗೀತ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗ, ಹಂಪಿ ವಿಶ್ವವಿದ್ಯಾಲಯದ ಪ್ರಸರಾಂಗ, ಕುವೆಂಪು ಭಾಷಾಭಾರತಿ ಗ್ರಂಥಾಲಯ ಸೇರಿದಂತೆ ಸುಮಾರು ೪೦ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಮೇಳದಲ್ಲಿ ಭಾಗವಹಿಸಿವೆ.
ವಿಶೇಷ ಆಕರ್ಷಣೆ: ಕಾರ್ಯಕ್ರಮದಲ್ಲಿ ಜೇಸಿಐ ಪುತ್ತೂರು ಸಾದರ ಪಡಿಸುವ ಸಾಂಪ್ರದಾಯಿಕ ಮತ್ತು ಹೊಸ ಶೈಲಿಯ ಅಪೂರ್ವ ಆಹಾರ ಮೇಳ ‘ಖಾದ್ಯೋತ್ಸವ’ ವನ್ನು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷೆ ಸ್ವಾತಿ ಜೆ ರೈ, ನ್ಯಾಯವಾದಿ ಜಗನ್ನಾಥ ರೈ, ಜೆಸಿಐಯ ಪಶುಪತಿ ಶರ್ಮ ಸೇರಿದಂತೆ ಪುಸ್ತಕ ಮೇಳದ ಗಣ್ಯರು ಭಾಗವಹಿಸಿದರು. ಸಂಪನ್ನವಾದ ಕಂಬಳ, ಕೋಳಿಕಟ್ಟವಾಗಲಿ ಅದು ಭಾರತೀಯ ಸಂಸ್ಕೃತಿ, ಅದು ಹೊರದೇಶದಲ್ಲಾದರೆ ಪ್ರವಾಸೋದ್ಯಮದ ಒಂದು ಭಾಗವಾಗುತ್ತದೆ. ನಮ್ಮ ದೇಶದಲ್ಲಿ ಅದು ಜೂಜು ಹೇಗಾಗುತ್ತದೆ ಎಂದು ಪ್ರಶ್ನಿಸಿದ ಅವರು ಪುತ್ತೂರಿನಲ್ಲಿ ಇವತ್ತು ಕೃಷಿ ಮತ್ತು ಋಷಿ ಸಂಸ್ಕೃತಿ ಕೂಡಿದೆ. ಇದರ ಜೊತೆಗೆ ದೇವಳದಿಂದ ಧಾರ್ಮಿಕ ಗ್ರಂಥಾಲಯವನ್ನು ಉದ್ಘಾಟಿಸುವ ಮೂಲಕ ಧಾರ್ಮಿಕವು ಜೊತೆ ಗೂಡಿ ಎಲ್ಲದರ ಒಟ್ಟು ತ್ರಿವೇಣಿ ಸಂಗಮವಾಗಿ ರಾಜ್ಯಮಟ್ಟದ ಪುಸ್ತಕ ಮೇಳ ಸಂಪನ್ನವಾಗಿದೆ. ಒಟ್ಟು ವ್ಯವಸ್ಥೆಯಲ್ಲಿ ಎರುತ್ತ ಬಡುತ್ತ ಒಟ್ಟಿಗೆ ಒಂಜಿ ಬೂಕು ಪತೋಂದು ಪೋಲೆ ಎಂಬ ಸಂದೇಶ ನಾವೆಕೆ ಕೊಡಬಾರದು ಎಂದು ಹೇಳಿದರು.
ನೂತನವಾಗಿ ಉದ್ಘಾಟನೆಗೊಂಡ ಧಾರ್ಮಿಕ ಗ್ರಂಥಾಲಯವನ್ನು ಮಕ್ಕಳು ಇದನ್ನು ಉಪಯುಕ್ತ ಮಾಡಬೇಕು. ಮುಂದಿನ ದಿನ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿ ಸರಿಯಾದ ಮಾಹಿತಿವುಳ್ಳ ವೆಬ್‌ಸೈಟ್‌ಗಳನ್ನು ಮಾಹಿತಿ ನೀಡಲಿದ್ದೇವೆ. ಮುಂದೆ ಅದನ್ನು ಬೆಳೆಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವ ದೇವಸ್ಥಾನ ಪುತ್ತೂರು ಹೇಳಿದರು.