ಉಪ್ಪಿನಂಗಡಿ: ಹಿಜಾಬ್ ಧಾರಿಣಿಯರಿಗೆ ತರಗತಿಗೆ ಪ್ರವೇಶ ನೀಡದಿರುವುದನ್ನು ವಿರೋಧಿಸಿ ಅವರ ಬೆಂಬಲವಾಗಿ ಇನ್ನು ಕೆಲವು ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿದ ಬಳಿಕ ಇನ್ನಷ್ಟು ಗೊಂದಲಗಳಿಗೆ ಕಾರಣವಾಗುವುದು ಇದು ಬೇಡ ಎಂದು ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿಗೆ ಎರಡು ದಿನಗಳ ಕಾಲ ರಜೆ ಸಾರಲಾಗಿದೆ.
ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದು, ಅವರಿಗೆ ತರಗತಿ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರು, ಸರಕಾರದ ಮತ್ತು ನ್ಯಾಯಾಲಯದ ಆದೇಶವನ್ನು ಮನವರಿಕೆ ಮಾಡಿಕೊಟ್ಟರಲ್ಲದೆ, ಕಾಲೇಜು ಕೊಠಡಿಯೊಳಗೆ ಸಮವಸ್ತ್ರ ಮಾತ್ರ ಬಳಸಲು ಮಾತ್ರ ಅವಕಾಶವೆಂದು ಸ್ಪಷ್ಟ ಪಡಿಸಿದರು. ಈ ವೇಳೆ ನಿಯಮಪಾಲಿಸಲು ಒಪ್ಪದ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲೇ ಕುಳಿತುಕೊಂಡರು.
ಈ ಸಂದರ್ಭ ಅವರನ್ನು ಬೆಂಬಲಿಸಿ ಕೆಲ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ಹೊರಗಡೆ ಬಂದು ಕುಳಿತುಕೊಂಡರು.ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪ್ರಾಂಶುಪಾಲರು ಇನ್ನು ಕಾಲೇಜಿನಲ್ಲಿ ಯಾವುದೇ ಗೊಂದಲಗಳಾಗುವುದು ಬೇಡ ಎಂದು ಎರಡು ದಿನಗಳ ಕಾಲ ಕಾಲೇಜಿಗೆ ರಜೆ ಸಾರಿದರು.
ಇತ್ತ ಇನ್ನುಳಿದ ವಿದ್ಯಾರ್ಥಿಗಳು ತರಗತಿ ನಡೆಸುವಂತೆ ಪ್ರಾಂಶುಪಾಲರಲ್ಲಿ ಮನವಿ ಮಾಡಿದ್ದು, ಅವರಿಗೂ ಪರಿಸ್ಥಿತಿಯ ಸೂಕ್ಷ್ಮತೆ ಮನವರಿಕೆ ಮಾಡಿದ ಪ್ರಾಂಶುಪಾಲರು, ಸೂಕ್ಷ್ಮತೆಯಿದ್ದಲ್ಲಿ ಕಾಲೇಜಿಗೆ ರಜೆ ಸಾರುವಂತೆ ಜಿಲ್ಲಾಧಿಕಾರಿಯವರ ಆದೇಶವಿದ್ದು, ಅದರಂತೆ ರಜೆ ಸಾರಲಾಗುವುದಾಗಿ ತಿಳಿಸಿದರು.