ವಿಟ್ಲ: ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ರವರ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ಫೆ.23 ರಂದು ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ರವರು, ಮತೀಯವಾದದ ಹೆಸರಿನಲ್ಲಿ ಈ ದೇಶವನ್ನು ನಾಶ ಮಾಡಬೇಕೆಂದು ಯಾರಾದರೂ ಯೋಚನೆ ಮಾಡಿದ್ದರೆ ಇನ್ನು ನಿಮ್ಮ ಯೋಚನೆ ನಡೆಯಲು ಸಾಧ್ಯವಿಲ್ಲ. ಸಂಘ ಪರಿವಾರದ ಯುವಕರು ಜಾಗೃತರಾಗಿದ್ದಾರೆ. ನಮ್ಮ ತಾಳೆಗೂ ಮಿತಿ ಇದೆ. ಇಲ್ಲಿಯವರೆಗೆ ಗಾಂಧೀಜಿಯವರು ಹೇಳಿದ್ದನ್ನು ಕೇಳಿದ್ದೇವೆ. ಭಾರತ ಹೇಗೆ ಬದಲಾಗುತ್ತಿದೆಯೋ ಹಾಗೆಯೇ ಈ ದೇಶದ ಸಂಸ್ಕೃತಿ, ಸಮಾಜವೂ ಎಚ್ಚರವಾಗುತ್ತಿದೆ ಎಂದರು.
ಬಜರಂಗದಳದ ಕಾರ್ಯಕರ್ತನಷ್ಟು ಸೇವೆಗೆ ಸಜ್ಜಾಗಿರುವ ವ್ಯಕ್ತಿ ಬೇರೆಲ್ಲೂ ಸಿಗಲಿಕ್ಕಿಲ್ಲ, ಬಜರಂಗದಳದ ಕಾರ್ಯಕರ್ತನನ್ನು ಟಾರ್ಗೆಟ್ ಮಾಡಿಕೊಂಡು ಹತ್ಯೆ ಮಾಡುವ ಕೆಲಸವನ್ನು ಮತೀಯ ಶಕ್ತಿಗಳು ಮಾಡಿವೆ. ಇಂದು ಲವ್‌ಜಿಹಾದ್, ಭಯೋತ್ಪಾದನೆಯನ್ನು ನೋಡುತ್ತಿದ್ದೇವೆ. ಮಠ ಮಂದಿರಗಳ ಮೇಲೆ ದಾಳಿ ಮಾಡಿದರು. ಭಯೋತ್ಪಾದನೆಯ ಕರಾಳ ಛಾಯೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ತಂದು ಅಲ್ಲೂ ಜಿಹಾದ್ ಮಾಡುತ್ತೇವೆ ಎಂದು ಹಿಜಾಬ್ ಜಿಹಾದ್‌ನ್ನು ಆರಂಭ ಮಾಡಿದ್ದಾರೆ. ಹಿಂದೂ ಸಮಾಜ ಇದನ್ನು ನೋಡಿಕೊಂಡು ಸುಮ್ಮನಿರಬೇಕೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಗೋವರ್ದನ್ ಇಡ್ಯಾಳ, ವಿಟ್ಲ ಪ್ರಖಂಡ ಸಂಯೋಜಕ ಚಂದ್ರಹಾಸ ಕನ್ಯಾನ, ಕಾರ್ಯದರ್ಶಿ ನಾಗೇಶ್ ಸಾಲೆತ್ತೂರು, ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರ್, ರಾಮ್ ದಾಸ್ ಶೆಣೈ,ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಅಧ್ಯಕ್ಷ ಪದ್ಮನಾಭ ಕಟ್ಟೆ, ಮೋಹನದಾಸ್ ಉಕ್ಕುಡ, ಅರುಣ್ ವಿಟ್ಲ, ಕರುಣಾಕರ ನಾಯ್ತೋಟು, ಹರೀಶ್ ಸಿ.ಹೆಚ್, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ್ ಕುಂಜೂರ್ ಪಂಜ, ಯತೀಶ್ ಪೆರುವಾಯಿ, ಪುನಿತ್ ಮಾಡ್ತಾರ್, ಉದಯ ಆಲಂಗಾರು ಹಾಗೂ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.



























