ಕಾರವಾರ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರ ತಾಲೂಕಿನ ಗುಣವಂತೆಯ ನಿವಾಸಿ ನೇತ್ರಾವತಿ ಗೌಡ ಎನ್ನುವವರಿಗೆ ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಇಮೇಲ್ ಕಳುಹಿಸಿ ನಂಬಿಕೆ ಹುಟ್ಟಿಸಿದ್ದರು. ವಿವಿಧ ಸುಂಕದ ಹೆಸರಿನಲ್ಲಿ ಕರ್ನಾಟಕ, ತ್ರಿಪುರಾ, ಆಸ್ಸಾಂ, ತಮಿಳುನಾಡು, ಮಣಿಪುರ, ಗುಜರಾತ್, ದೆಹಲಿ ರಾಜ್ಯದಲ್ಲಿರುವ ತಮ್ಮ ಒಟ್ಟು 17 ಬ್ಯಾಂಕ್ ಖಾತೆಗಳಿಗೆ ನೇತ್ರಾವತಿಯಿಂದ ಹಣ ಹಾಕಿಸಿಕೊಂಡಿದ್ದರು.
ಅಮೆರಿಕದಲ್ಲಿ ಉದ್ಯೋಗದ ಆಮಿಷ: ಯುವತಿಗೆ 57.14 ಲಕ್ಷ ರೂ. ವಂಚನೆ ಒಟ್ಟು ರೂ. 57,14,749 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ದುಷ್ಕರ್ಮಿಗಳು ಬಳಿಕ ವಂಚಿಸಿದ್ದರು. ಈ ವಂಚನೆ ಪ್ರಕರಣದ ಬಗ್ಗೆ ನೇತ್ರಾವತಿ ಅವರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಫೆ.10ರಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಸಿಇನ್ ಅಪರಾಧ ಠಾಣೆಯ ಇನ್ಸ್ಪೆಕ್ಟರ್ ಸೀತಾರಾಮ ಪಿ. ಹಾಗೂ ಅವರ ಸಿಬ್ಬಂದಿಗಳು ತನಿಖೆ ಆರಂಭಿಸಿದ್ದರು.
ಕೋಲಾರ ಮೂಲದ ಅಶೋಕ ಎಂ. ಎನ್, ಅಸ್ಸಾಂ ಮೂಲದ ಬುಲ್ಲಿಯಂಗಿರ್ ಹಲಾಮ್, ತ್ರಿಪುರ ಮೂಲದ ದರ್ತಿನ್ಬೀರ್ ಹಲಾಮ್, ಮಣಿಪುರ ಮೂಲದ ವೊರಿಂಗಮ್ ಫುಂಗ್ಶೋಕ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಹಣ ವರ್ಗಾವಣೆ ಮಾಡಿಸಿಕೊಂಡ ಎಲ್ಲಾ ಬ್ಯಾಂಕ್ ಖಾತೆಗಳಿಂದ 2,61,528 ರೂ.ಗಳನ್ನು ಪ್ರೀಜ್ ಮಾಡಿಸಿದ್ದು, ಸದರಿ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಪಡೆದುಕೊಂಡು ತಾಂತ್ರಿಕವಾಗಿ ವಿಶ್ಲೇಷಣೆ ಮಾಡಿ, ಆರೋಪಿತರ ಪತ್ತೆಗಾಗಿ ತಂಡವನ್ನು ರಚಿಸಿಕೊಂಡು ಬೆಂಗಳೂರಿಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ 24,000 ರೂ. ನಗದು, ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಥಂಬ್ ಮೆಶಿನ್, 24 ಬ್ಯಾಂಕ್ ಖಾತೆ, 24 ಎಟಿಎಮ್ ಕಾರ್ಡ್, 24 ಚೆಕ್ ಬುಕ್, 2 ಲ್ಯಾಪ್ಟಾಪ್, 23 ಮೊಬೈಲ್, 17 ಸಿಮ್, 1 ಟ್ಯಾಬ್, 2 ಪೆನ್ಡ್ರೈವ್, ಒಂದು ವೈಫೈ ರೂಟರ್ ಜಪ್ತಿ ಮಾಡಲಾಗಿದೆ.