ಮಂಗಳೂರು: ಕೇರಳಕ್ಕೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಕೊಣಾಜೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಮೀರ್, ಮುಹಮ್ಮದ್ ಫರ್ವೀಝ್, ಅನ್ಸಿಫ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ, ಮೆಲ್ಕಾರ್, ಬೋಳಿಯಾರು, ಕಂಬಳಪದವು ಮಾರ್ಗವಾಗಿ ಚಲಿಸಿಕೊಂಡು ಬಂದ ಕಾರನ್ನು ಖಚಿತ ಮಾಹಿತಿಯ ಮೇರೆಗೆ ಮಂಗಳೂರು ವಿವಿ ದ್ವಾರದ ಬಳಿ ತಡೆದು ನಿಲ್ಲಿಸಿದ ಪೊಲೀಸರು ಪರಿಶೀಲಿಸಿದಾಗ 60 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು, ಎರಡು ಸ್ಮೋಕ್ ಟ್ಯೂಬ್, 1 ಲೈಟರ್, 1 ಡಿಜಿಟಲ್ ತೂಕವಿರುವ ವಸ್ತುಗಳು ಪತ್ತೆಯಾಗಿದೆ.
ಕೇರಳಕ್ಕೆ ಸಾಗಿಸುತ್ತಿರುವ ಬಗ್ಗೆ ಕಾರಿನಲ್ಲಿದ್ದ ಮೂವರು ಬಾಯ್ಬಿಟ್ಟಿದ್ದು, ಅದರಂತೆ ವಸ್ತು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ.
ಎಂ.ಡಿ.ಎಂ.ಎ ಇದರ ಮೌಲ್ಯ 3.60 ಲಕ್ಷ ರೂಪಾಯಿ ಮತ್ತು ಕಾರಿನ ಮೌಲ್ಯ 5 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.