ಪುತ್ತೂರು: ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್ ನೇತೃತ್ವದಲ್ಲಿ ‘ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು’ – ಗೋವು ಆಧಾರಿತ ಉತ್ಪನ್ನಗಳ ತಯಾರಿಕಾ ಕಾರ್ಯಗಾರವನ್ನು ಫೆ.27 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ಪುತ್ತೂರಿನ ಕಬಕ ಸಮೀಪದ ಓಜಾಲದಲ್ಲಿರುವ ಮುಳಿಯ ಗೋವಿಹಾರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಗೋಫಲ ಟ್ರಸ್ಟ್ ನ ಟ್ರಸ್ಟಿ ಕೇಶವ ಪ್ರಸಾದ್ ಮುಳಿಯ ಅವರು ದೀಪೋಜ್ವಲನ ಮಾಡಿ ನಮ್ಮಲ್ಲಿ ಗೋವಿನ ಮಹತ್ವ, ಗೋವಿನಿಂದ ತಯಾರಾಗುವ ಗೋಜನ್ಯ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಹೇಗೆ ಪೂರಕವಾಗಿರುತ್ತದೆ ಎಂದು ತಮ್ಮ ಅನುಭವ ಹಂಚಿಕೊಳ್ಳುವುದರೊಂದಿಗೆ ಗೋವಿನ ರಕ್ಷಣೆ ಮತ್ತು ಗೋಶಾಲೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಫಲ ಟ್ರಸ್ಟ್ನ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ ಮಾತನಾಡಿ ಪ್ರತಿಯೊಬ್ಬರು ಗೋವುಗಳನ್ನು ಸಾಕಲು ಮನಸ್ಸು ಮಾಡಬೇಕು, ಪ್ರತಿಯೊಂದು ಮನೆಯಲ್ಲಿ ಗೋವುಗಳನ್ನು ಸಾಕಬೇಕು. ಈಗಿನ ಕಾಲಘಟ್ಟದಲ್ಲಿ ಗೋವುಗಳನ್ನು ಸಾಕಲು ಜನರು ಹೆದರುತ್ತಾರೆ. ಗೋ ಸಾಕಾಣೆಯೂ ಲಾಭದಾಯಕ. ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಬೆಳೆಸುತ್ತಾ ಗೋಶಾಲೆಗಳನ್ನು ಕೂಡ ಬೆಳೆಸಬೇಕು ಎಂದು ಹೇಳಿದರು.
ಕೃಷಿಕರಾದ ಪ್ರಶಾಂತ್ ರೈ ಕೈಕಾರ ರವರು ಪ್ರಾಸ್ತಾವಿಕ ಮಾತನ್ನಾಡಿ ಗೋವುಗಳ ಮಹತ್ವ ಗೋ ಉತ್ತನ್ನ ತಯಾರಿಕಾ ಕಾರ್ಯಾಗಾರದ ಅವಶ್ಯಕತೆಗಳನ್ನು ಹೇಳಿದರು.
ಗೋವಿಹಾರ ಅಧ್ಯಕ್ಷರಾದ ಕೃಷ್ಣನಾರಾಯಣ ಮುಳಿಯರವರು ಮಾತನಾಡಿ, ಗೋವಿನಿಂದಾಗುವ ಪ್ರಯೋಜನಗಳು ಮತ್ತು ಮುಳಿಯ ಗೋವಿಹಾರದ ಬಗ್ಗೆ ವಿಶೇಷ ಮಾಹಿತಿ, ಹಾಗೂ ಕಾರ್ಯಾಗಾರದ ಉಪಯುಕ್ತತೆ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಮೇಶ್ ಕುಲಕರ್ಣಿ, ಡಾ. ಎಮ್ ಯದುಕುಮಾರ್, ಉದಯ್ ಶಂಕರ್, ಕೆ.ಟಿ ವೆಂಕಟೇಶ್, ಭಾಸ್ಕರ್ ರಾವ್ ಉಬರಡ್ಕ, ಜಯಗುರು ಆಚಾರ್ಯ ಹಿಂದಾರು ಭಾಗವಹಿಸಿದ್ದರು. ಗೋವಿನಿಂದಾಗಿ ಮನುಷ್ಯರಿಗೆ ದಿನನಿತ್ಯ ಬಳಕೆಯಾಗುವ ದಂತಮಂಜನ್, ಸೋಪು, ದೂಪಬತ್ತಿ, ಹಣತೆ, ವಿಭೂತಿ, ಬೆರಣಿ, ಧೂಪ, ಸ್ವರ್ಗಸಾರ, ಗೋನಂದಾಜಲ, ಎರೆಹುಳ ಗೊಬ್ಬರ, ಗಣಪತಿ ವಿಗ್ರಹ, ಅಮೃತ್ ಮಲಂ ಅಲ್ಲದೆ ಇತರ ಸೌಂದರ್ಯವರ್ಧಕ ಸಾಮಾಗ್ರಿಗಳು, ಕೃಷಿ ಭೂಮಿಗೆ ಬೇಕಾಗುವ ಜೀವಾಮೃತ, ಕೀಟ ನಿಯಂತ್ರಕ, ಜೀವಾಮೃತ ಔಷಧಿಗಳನ್ನು ತಯಾರಿಸುವ ವಿಧಾನವನ್ನು ಈ ಶಿಬಿರದಲ್ಲಿ ಕಲಿಸಿಕೊಡಲಾಯಿತು.
ಕಾರ್ಯಕ್ರಮವನ್ನು ಶಿವಪ್ರಸಾದ್ ರವರು ನಿರೂಪಿಸಿದರು. ಮುಳಿಯ ಗೋವಿಹಾರದ ಉಸ್ತುವಾರಿ ಸದಾಶಿವರವರು ಸ್ವಾಗತಿಸಿದರು.