ಕಾರ್ಕಳ: ಜಾಗದ ತಕರಾರಿನ ವೈಷಮ್ಯಕ್ಕೆ ಒಡಹುಟ್ಟಿದ ಅಣ್ಣನನ್ನೇ ಚೂರಿಯಿಂದ ಇರಿದು ಕೊಂದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ಮಾ. 6ರಂದು ಸಂಭವಿಸಿದೆ.
ಶೇಖರ್ (50) ಕೊಲೆಯಾದವರು. ಅವರ ಸಹೋದರ ರಾಜು (35) ಕೊಲೆಗೈದ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ. ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕ ವಾಗಿ ವಾಸಿಸುತ್ತಿದ್ದರು.
ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದರು. ಅಣ್ಣನೊಂದಿಗೆ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ ವಾಸವಾಗಿದ್ದ. ರವಿವಾರ ಶೇಖರ ಮನೆಯಲ್ಲಿ ಅಂಗಳದ ಕೆಲಸದಲ್ಲಿ ನಿರತನಾಗಿದ್ದರು. ಮೂವರು ಕೆಲಸಗಾರರೊಂದಿಗೆ ಜಲ್ಲಿಯನ್ನು ಹೊತ್ತು ಮನೆಗೆ ಸಾಗಿಸುತ್ತಿದ್ದರು.
ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ಮಾಡದಂತೆ ಆಕ್ಷೇಪಿಸಿದ್ದ. ಅದಕ್ಕೆ ಶೇಖರ ಕಿವಿಗೊಡದೆ ತನ್ನ ಪಾಡಿಗೆ ಕೆಲಸ ಮುಂದುವರಿಸಿದ್ದರು. ನಿನಗೆ ಕಲಿಸುತ್ತೇನೆ ಎಂದು ಬೆದರಿಕೆಯೊಡ್ಡಿ ತನ್ನ ಮನೆಗೆ ತೆರಳಿದ ರಾಜು ಚೂರಿಯನ್ನು ಜತೆಗೆ ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ. ಗಂಭೀರ ಗಾಯಗೊಂಡು ಅತೀವ ರಕ್ತಸ್ರಾವದಿಂದ ಶೇಖರ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.