ಪುತ್ತೂರು: ಕಡಬ ತಾಲೂಕಿನ ಮಹಿಳೆಯೋರ್ವರಿಗೆ,ಅವರ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಮಹಿಳಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿತನಿಗೆ ಪುತ್ತೂರಿನ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಿರಂತರವಾಗಿ, ಮಹಿಳೆಯೋರ್ವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು, ವಾಟ್ಸಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಾ, ಬೇರೆಯವರ ಶರೀರಕ್ಕೆ ದೂರುದಾರರ ಮುಖವನ್ನು ಅಂಟಿಸಿ ಇದನ್ನು ಪ್ರಚಾರ ಪಡಿಸುವುದಾಗಿ ಬೆದರಿಕೆಯೊಡ್ಡಿದ ಬಗ್ಗೆ, ನೊಂದ ಮಹಿಳೆಯೋರ್ವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ ಬೆಳ್ತಂಗಡಿ ತಾಲೂಕಿನ ರಂಝಿನ್ ಎಂಬವನನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿ, ಮೊಬೈಲನ್ನು ವಶಪಡಿಸಿಕೊಂಡು, ಆರೋಪಿತನನ್ನು ಬಂಧಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತದನಂತರ, ಆರೋಪಿಗೆ ನ್ಯಾಯಾಲಯ, ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆರೋಪಿತನಿಗೆ ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿ ಬಿಡುಗಡೆಗೊಳಿಸಿದೆ.
ಆರೋಪಿ ಪರವಾಗಿ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದರು.