ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆಯ ಪ್ರಕರಣಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬರುತ್ತಲೇ ಇವೆ. ಮಂಗಳವಾರ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿಂದೆ ವೇಶ್ಯಾವಾಟಿಕೆ ದಂಧೆಯಲ್ಲಿ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ಥರನ್ನು ಮಂಗಳೂರು ಪೊಲೀಸರು ರಕ್ಷಣೆ ಮಾಡಿದ್ದರು. ಇದೀಗ ಮತ್ತೊಬ್ಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಈ ಮೂಲಕ ಪೊಲೀಸರು ಪ್ರತ್ಯೇಕ 4 ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರಶೀದ್ ಸಾಹೇಬ್(73), ಮೊಹಮ್ಮದ್ ಆಲಿ(74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62) ಹಾಗೂ ಇಸ್ಮಾಯಿಲ್(41) ಬಂಧಿತ ಆರೋಪಿಗಳಾಗಿದ್ದು, ಗ್ರಾಹಕರ ರೀತಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಮಂಗಳೂರಿನ ನಂದಿಗುಡ್ಡ ರಿಯಾನಾ ರೆಸಿಡೆನ್ಸಿ ಅಪಾರ್ಟ್ಮೆಂಟ್‌ನ ಪೆಂಟ್ ಹೌಸ್‌ನಲ್ಲಿ ಈ ಹೈಟೆಕ್ ವೇಶ್ಯಾವಾಟಿಕೆ ಬೆಳಕಿಗೆ ಬಂದಿತ್ತು. ಮಂಗಳೂರಿನ ಸಿಸಿಬಿ ಪೊಲೀಸರು ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದ್ದರು. ಇದೀಗ 5 ಪ್ರಕರಣಗಳನ್ನು ದಾಖಲಿಸಿ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.