ಬೆಂಗಳೂರು: ಪುತ್ತೂರಿನ ಪೂರ್ವ ಭಾಗದ ಆಸ್ಪತ್ರೆಯ ಬಗ್ಗೆ ವಾಸ್ತವಕ್ಕೆ ವಿರುದ್ಧವಾಗಿ ಆರೋಗ್ಯ ಸಚಿವರ ಉತ್ತರವಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ವಿಧಾನಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು “ಪುತ್ತೂರು ಪೂರ್ವ ಭಾಗದ ಆಸ್ಪತ್ರೆಯಲ್ಲಿ ನನ್ನ ಮೂರು ವರ್ಷದ ರಾಜಕೀಯ ಅವಧಿಯಲ್ಲಿ ನೋಡಿದಂತೆ 2,72,000 ಹೊರ ರೋಗಿಗಳು ಹಾಗೂ 14264 ಒಳ ರೋಗಿಗಳು ಹಾಗೂ ತಿಂಗಳಿಗೆ 20 ರಿಂದ 30 ಸಿಜೇರಿಯನ್ ಹೆರಿಗೆಗಳು ಆಗುತ್ತದೆ.
ಅಂತೆಯೇ ತಿಂಗಳಿಗೆ 70-80 ಸಹಜ ಹೆರಿಗೆಗಳು ಆಗುತ್ತದೆ. ಆದರೆ ಆರೋಗ್ಯ ಸಚಿವರು ಮೊನ್ನೆ ಸರಾಸರಿ 43 ಹೆರಿಗೆಗಳು ಆಗುತ್ತದೆ ಎಂದು ಉತ್ತರಿಸಿದ್ದೀರಿ. 4 ತಾಲ್ಲೂಕುಗಳಿಗೆ ಸಂಬಂಧಪಟ್ಟಂತೆ ಆ ಆಸ್ಪತ್ರೆಗೆ ಒತ್ತಡ ಹೆಚ್ಚಾಗುತ್ತಿದೆ. ಮಂಗಳೂರಿನ ಜಿಲ್ಲಾಸ್ಪತ್ರೆ ವೆನ್ಲಾಕ್‌ಗೆ ಕರ್ನಾಟಕ ಸೇರಿದಂತೆ ಅನೇಕ ಜಿಲ್ಲೆಯ ರೋಗಿಗಳು ಬರುತ್ತಾರೆ. ಆದರೆ ಪುತ್ತೂರಿನ ಗ್ರಾಮೀಣ ಭಾಗದಲ್ಲಿರುವ ಈ ಆಸ್ಪತ್ರೆಗೆ ಸೂಕ್ತ ಸೌಲಭ್ಯ ನೀಡುವುದರ ಮೂಲಕ ಅದನ್ನು ಅಭಿವೃದ್ಧಿ ಮಾಡಬೇಕು. ಹಾಗೆಯೇ ಅದನ್ನು ತಾಯಿ ಮಕ್ಕಳ ಆಸ್ಪತ್ರೆಯಾಗಿ ಪರಿವರ್ತನೆ ಮಾಡಬೇಕು. ಅದಕ್ಕೆ ಬೇಕಾಗುವಂತಹ ಜಾಗಗಳನ್ನು ಈ ಮೊದಲೇ ಕಾಯ್ದಿರಿಸಿದ್ದೇವೆ. ಈ ದೆಸೆಯಲ್ಲಿ ಅಂದಾಜು ಪಟ್ಟಿಯಂತೆ ಮೇಲ್ದರ್ಜೆಗೆ ಏರಿಸಬೇಕು. ಉತ್ತಮ ಪ್ರಸೂತಿ ವೈದ್ಯರನ್ನು ಅಲ್ಲಿ ನೇಮಕ ಮಾಡಬೇಕು. ಆಗ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಾರೆ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ “ಸರ್ಕಾರಿ ಮಟ್ಟದಲ್ಲಿ ನಾವು ಪರಿಶೀಲನೆ ಮಾಡ್ತಾ ಇದ್ದೇವೆ, ವಾಸ್ತವ ಸತ್ಯಾಂಶಗಳ ಬಗ್ಗೆ ಬೇಕಾದರೆ ಮತ್ತೆ ಸಭೆ ನಡೆಸೋಣ. 40 ರಷ್ಟು ಅನುದಾನ ಇದಕ್ಕೆ ನಾವು ಕೊಟ್ಟರೆ ಭಾರತ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ನೀಡುತ್ತದೆ, ಈ ಬಗ್ಗೆ ಚಿಂತನೆ ನಡೆಸೋಣ” ಎಂದು ಹೇಳಿದರು.
ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು 300 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ಹಾಗೂ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ವಿಶೇಷ ಘಟಕವನ್ನು ಆರಂಭಿಸಲು ಸರಕಾರಕ್ಕೆ ಒತ್ತಡ ತಂದ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರ ಮನವಿಯನ್ನು ವಿಧಾನಸಭೆಯಲ್ಲಿ ಗಂಭೀರವಾಗಿ ಪರಿಗಣಿಸಲಾಯಿತು.