ಪುತ್ತೂರು: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿನ ಮೀಸಲು ಅರಣ್ಯ ಭೂಮಿಯನ್ನು ಒತ್ತುವರಿ ನಡೆಸಿ ಅಲ್ಲಿ ಮದರಸ ಕಟ್ಟಡ ಮತ್ತು ದಫನ ಭೂಮಿಯನ್ನಾಗಿ ಮಾಡಿಕೊಂಡಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ಈ ಒತ್ತುವರಿಯನ್ನು ತೆರವುಗೊಳಿಸದಿದ್ದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂಜಾವೇ ಪುತ್ತೂರು ಜಿಲ್ಲೆ ಕಾರ್ಯದರ್ಶಿ ನರಸಿಂಹ ಮಾಣಿ ಎಚ್ಚರಿಸಿದ್ದಾರೆ.
ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗೂನಡ್ಕ ಮಸೀದಿ ಹತ್ತಿರ ಸಂಪಾಜೆ ರಕ್ಷಿತಾರಣ್ಯದ ಗಡಿಯಲ್ಲಿನ ಅರಣ್ಯ ಭೂಮಿಯನ್ನು ಮಸೀದಿಯವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ 2015ರಲ್ಲಿ ದೂರು ನೀಡಲಾಗಿತ್ತು. ಈ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು.
ಅರಣ್ಯ ಇಲಾಖೆಯ ಎಸಿಎಫ್ ಮತ್ತು ಸಿಸಿಎಫ್ ಕೋರ್ಟ್ನಲ್ಲಿ ಅಕ್ರಮವನ್ನು ತೆರವುಗೊಳಿಸಿ ಅರಣ್ಯ ಇಲಾಖೆ ಸ್ವಾಧೀನಕ್ಕೆ ಪಡೆದುಕೊಳ್ಳುವಂತೆ ಆದೇಶ ನೀಡಲಾಗಿದೆ. ಅಲ್ಲದೆ ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಆದರೆ ಈ ತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮುಂದಿನ ಒಂದು ತಿಂಗಳ ಒಳಗಾಗಿ ಎಸಿಎಫ್ ಮತ್ತು ಸಿಸಿಎಫ್ ಕೋರ್ಟ್ನ ಆದೇಶವನ್ನು ಜಾರಿಗೊಳಿಸಬೇಕು.
2015ರಲ್ಲಿ ದಾಖಲಿಸಲಾಗಿದ್ದ ಪೊಲೀಸ್ ದೂರು ಎಫ್‌ಐಆರ್‌ನ್ನು ಊರ್ಜಿತಗೊಳಿಸಬೇಕು ಮತ್ತು ಒತ್ತುವರಿ ವಿಚಾರದಲ್ಲಿ ಕಾನೂನು ಬಾಹಿರ ನಡವಳಿಕೆ ತೋರಿದ ಅರಣ್ಯ ಇಲಾಖೆಯ ಅಧಿಕಾರಿಯನ್ನು ವಜಾಗೊಳಿಸಬೇಕು ಇಲ್ಲದಿದ್ದಲ್ಲಿ ಸುಳ್ಯ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲಾಗುವುದು. ಮುಂದೆ ಎಲ್ಲೆಡೆ ಉಗ್ರ ಹೋರಾಟ ನಡೆಸಲಾಗುವುದು. ಮುಂದೆ ಆಗುವ ಎಲ್ಲಾ ತೊಂದರೆಗಳಿಗೆ ಇಲಾಖೆ ಮತ್ತು ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಜಯಂತ ಮಡಪ್ಪಾಡಿ, ಸುಳ್ಯದ ಅಧ್ಯಕ್ಷ ಮಹೇಶ್ ಉಗ್ರಾಣಿಮನೆ, ಪುತ್ತೂರು ಪ್ರಧಾನ ಕಾರ್ಯದರ್ಶಿ ದಿನೇಶ್ ಪಂಜಿಗೆ ಮತ್ತು ರಾಜೇಶ್ ಪಂಚೋಳಿ ಉಪಸ್ಥಿತರಿದ್ದರು.