ಬೆಂಗಳೂರು: ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರತಿ ಪುಟಕ್ಕೂ ಸಹಿ ಹಾಕಿ ಹೇಳಿಕೆ ನೀಡಿದ ಮುಖ್ಯ ನ್ಯಾಯಮೂರ್ತಿ ಸಿಜೆ ರಿತುರಾಜ್ ಅವಸ್ತಿ, ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ. ಅವುಗಳಿಗೆ ಉತ್ತರವನ್ನೂ ನೀಡಿದ್ದೇವೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ನಿಗದಿಪಡಿಸುವುದು ಸೂಕ್ತವಾದ ನಿರ್ಬಂಧನೆ. ಸರ್ಕಾರದ ಆದೇಶ ಕಾನೂನು ಬದ್ದವಾಗಿದೆ ಎಂದರು.
ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗವೂ ಅಲ್ಲ. ಸಮವಸ್ತ್ರ (Uniform)ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka Highcourt)ಎತ್ತಿ ಹಿಡಿದಿದೆ. ಸಮವಸ್ತ್ರ ಕಡ್ಡಾಯವಾಗಿರುವ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ. ಹಿಜಾಬ್ ಪರವಾಗಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ ಎಂದು ಹೇಳಿದೆ.
ಹಿಜಾಬ್ ವಿವಾದ ಆರಂಭವಾಗಿ ತಿಂಗಳೇ ಕಳೆಯಿತು. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ 6 ಮಂದಿ ಮುಸ್ಲಿಂ ವಿದ್ಯಾರ್ಥಿಗಳ ವಿಚಾರದಲ್ಲಿ ಶುರುವಾದ ಹಿಜಾಬ್ ಸಮಸ್ಯೆ ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿತ್ತು. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ತಾವು ಕೇಸರಿ ಶಾಲು ಧರಿಸುವುದಾಗಿ ಇತ್ತ ಹಿಂದೂ ಸಮುದಾಯದ ಕೆಲ ಹುಡುಗರು ಪ್ರತಿಭಟನೆಗೆ ಇಳಿದರು. ಇದು ಶಾಲಾ- ಕಾಲೇಜು ವರ್ಗ ಹಾಗೂ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ರಾಜಕೀಯ ನಾಯಕರು, ಎರಡೂ ಸಮುದಾಯದ ಮುಖಂಡರ ಹೇಳಿಕೆ, ನಿಲುವುಗಳ ನಡುವೆ ವಿವಾದ ದೇಶಾದ್ಯಂತ ಸುದ್ದಿ ಮಾಡಿತು. ಅಷ್ಟೇ ಏಕೆ ವಿದೇಶಿ ಮಾಧ್ಯಮಗಳಲ್ಲಿ ಕೂಡ ಹಿಜಾಬ್- ಕೇಸರಿ ಶಾಲು ವಿವಾದ ಚರ್ಚೆಗೊಳಗಾಯಿತು.
ಹೀಗೆ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ವಿವಾದ, ಶಿವಮೊಗ್ಗ, ಮೈಸೂರು, ಬೀದರ್, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ತಾರಕಕ್ಕೇರಿತು. ಕೊನೆಗೆ ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತು. ಕೆಲವೆಡೆ ಶಾಲಾ ಕಾಲೇಜು ಆಡಳಿತ ಮಂಡಳಿ ಅನಿರ್ಧಿಷ್ಟಾವಧಿ ರಜೆಯನ್ನೂ ನೀಡಿತು. ಇಂತಹ ಪರಿಸ್ಥಿತಿಯಲ್ಲಿ ಜನವರಿ 31 ರಂದು ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಯಿತು. ಬಳಿಕ, ಫೆಬ್ರವರಿ 3 ರಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಫೆಬ್ರವರಿ 9 ರಂದು ಪ್ರಕರಣ ಪೂರ್ಣ ಪೀಠಕ್ಕೆ ವರ್ಗಾವಣೆ ಮಾಡಲಾಯಿತು.
ಫೆಬ್ರವರಿ 11 ರಂದು ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಬಳಿಕ 11 ದಿನಗಳ ಕಾಲ ಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆಸಲಾಯಿತು. ನಂತರ ಫೆಬ್ರವರಿ 25 ರಂದು ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್, ಇಂದು (ಮಾರ್ಚ್ 15) ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ರವರ ಪೂರ್ಣ ಪೀಠ ತೀರ್ಪು ನೀಡಿದೆ.