‘ದಿ ಕಾಶ್ಮೀರ್ ಫೈಲ್ಸ್’ ವಿಚಾರವಾಗಿ ಎದ್ದಿರುವ ಪರ-ವಿರೋಧಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನ ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಚಿತ್ರದ ಬಗ್ಗೆ ಮಾತನಾಡಿ.. ಇದು ತುಂಬಾ ಒಳ್ಳೆಯ ಚಿತ್ರ. ಎಲ್ಲರೂ ಈ ಚಿತ್ರವನ್ನು ನೋಡಬೇಕು. ಇಂತಹ ಚಿತ್ರಗಳು ಹೆಚ್ಚೆಚ್ಚು ಮಾಡಬೇಕು ಅಂತಾ ಕರೆ ನೀಡಿದ್ದಾರೆ.
ಸತ್ಯ ಹೊರ ಬರುತ್ತದೆ
ಇಂತಹ ಚಿತ್ರಗಳಿಂದ ಸತ್ಯ ಹೊರಬರುತ್ತದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಚರ್ಚೆ ನಡೆಯಬೇಕು. ವರ್ಷಗಳ ಕಾಲ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಸರಿಯಾದ ಇತಿಹಾಸವನ್ನು ಮುನ್ನೆಲೆಗೆ ತರುವುದು ಅಗತ್ಯ. ಈ ಚಿತ್ರದ ಬಗ್ಗೆ ಷಡ್ಯಂತ್ರಗಳು ನಡೆಯುತ್ತಿವೆ. ಸತ್ಯವನ್ನು ಬಯಲಿಗೆಳೆಯುವ ಚಿತ್ರದ ತಂಡದ ಧೈರ್ಯವನ್ನು ನಾವು ಮೆಚ್ಚಲೇಬೇಕು ಎಂದರು.
ತುರ್ತು ಪರಿಸ್ಥಿತಿ ಬಗ್ಗೆ ಯಾಕೆ ಸಿನಿಮಾ ಆಗಿಲ್ಲ..?
ಅಂದು ನಾವು ಧೈರ್ಯ ಮಾಡಿ ಮಹಾತ್ಮ ಗಾಂಧೀಜಿ ಜೀವನ ಚರಿತ್ರೆಯನ್ನು ಸಿನಿಮಾ ಮಾಡಿದ್ದರೆ ಜಗತ್ತಿಗೆ ಸಂದೇಶ ನೀಡಲು ಸಾಧ್ಯವಾಗ್ತಿತ್ತು. ವಿದೇಶಿಗನೊಬ್ಬ ಮೊದಲ ಬಾರಿಗೆ ಗಾಂಧಿ ಸಿನಿಮಾ ಮಾಡಿ ‘ಆಸ್ಕರ್ ಪ್ರಶಸ್ತಿ’ ‘ಪಡೆದಾಗ ಗಾಂಧಿ ಎಂಥ ಮಹಾನ್ ವ್ಯಕ್ತಿ’ ಎಂದು ಜಗತ್ತಿಗೆ ತಿಳಿಯಿತು. ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾರೆ. ನೀವು ನೋಡಿರಬೇಕು, ಎಮರ್ಜೆನ್ಸಿ ಎಷ್ಟೊಂದು ದೊಡ್ಡ ಘಟನೆ, ಆದರೆ ಇದುವರೆಗೂ ಆ ಬಗ್ಗೆ ಸಿನಿಮಾ ಮಾಡೋಕಾಗಿಲ್ಲ. ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ಭಾರತ ವಿಭಜನೆಯ ದಿನ ಆಗಸ್ಟ್ 14’ ಅಂತಾ ನಾವು ಘೋಷಿಸಿದಾಗ ಅನೇಕರು ಸಂಕಷ್ಟಕ್ಕೆ ಸಿಲುಕಿದರು. ಇದನ್ನೆಲ್ಲಾ ಮರೆಯೋದಾದರೂ ಹೇಗೆ? ಭಾರತದ ವಿಭಜನೆಯ ಬಗ್ಗೆ ಇದುವರೆಗೆ ಯಾವುದಾದರೂ ಅಧಿಕೃತ ಚಿತ್ರಗಳು ನಿರ್ಮಾಣ ಆಗಿದೆಯೇ ಎಂದು ಪ್ರಶ್ನಿಸಿದರು.
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಚರ್ಚೆ ನಡೆಯುತ್ತಿದೆ. ಸದಾ ಅಭಿವ್ಯಕ್ತಿ ಸ್ವಾತಂತ್ರ್ಯದ ಬಾವುಟ ಹಿಡಿದು ಓಡಾಡುವ ಜನ ಬೆಚ್ಚಿಬಿದ್ದಿದ್ದಾರೆ. ಈ ಚಿತ್ರವನ್ನು ವಾಸ್ತವ ಮತ್ತು ಕಲೆಯ ಆಧಾರದ ಮೇಲೆ ಚರ್ಚಿಸುವ ಬದಲಾಗಿ ಅಪಖ್ಯಾತಿಗೊಳಿಸುವ ಅಭಿಯಾನ ನಡೆಯುತ್ತಿದೆ. ನಿಮಗೆ ಇದು ಗೊತ್ತಿರಬೇಕು. ಕಾಶ್ಮೀರಿ ಪಂಡಿತರು ಯಾವ ಸತ್ಯವನ್ನು ಅನುಭವಿಸಿದ್ದರೋ ಅದನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇದನ್ನ ಒಪ್ಪಿಕೊಳ್ಳಲು ಕೆಲವರು ತಯಾರಿಲ್ಲ. ಕಳೆದ ಐದಾರು ದಿನಗಳಿಂದ ಸಣ್ಣ ಸಣ್ಣ ಷಡ್ಯಂತ್ರ ನಡೆಯುತ್ತಿದೆ ಎಂದು ಟೀಕಿಸಿದರು.
ನನ್ನ ವಿಷಯ ಈ ಚಿತ್ರದ ಬಗ್ಗೆ ಅಲ್ಲ, ಸತ್ಯವನ್ನು ದೇಶದ ಮುಂದೆ ತೋರಿಸೋದು. ದೇಶದ ಒಳಿತಿಗಾಗಿ ಅನ್ನೋದು ನನ್ನ ವಿಷಯ. ಅದರಲ್ಲಿ ಅನೇಕ ಅಂಶಗಳಿರಬಹುದು. ಈ ಚಿತ್ರದಿಂದ ಕೆಲವರು ಒಂದು ವಿಷಯವನ್ನು ನೋಡಿದ್ರೆ ಇನ್ನೊಬ್ಬರು ಇನ್ನೊಂದು ವಿಚಾರವನ್ನ ನೋಡ್ತಾರೆ. ಈ ಚಿತ್ರ ಚೆನ್ನಾಗಿಲ್ಲ ಎಂದು ಯಾರಿಗೆ ಅನಿಸುತ್ತದೆಯೋ ಅವರು, ತಮ್ಮ ಎರಡನೇ ಸಿನಿಮಾ ಮಾಡಲಿ. ಆದರೆ ಅವರಿಗೆ ಆಶ್ಚರ್ಯ ಆಗಿದೆ. ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯವನ್ನು ಹೊರ ತಂದಿರೋದಕ್ಕೆ. ಇದನೆಲ್ಲಾ ಯಾರೋ ಕಷ್ಟಪಟ್ಟು ತರುತ್ತಿದ್ದಾರೆ, ಅವುಗಳನೆಲ್ಲ ಮುಚ್ಚಿ ಹಾಕಲು ಎಲ್ಲಾ ಪ್ರಯತ್ನಗಳೂ ನಡೆದಿವೆ. ಇಂತಹ ಸಂದರ್ಭದಲ್ಲಿ ಸತ್ಯದ ಪರ ನಿಲ್ಲಬೇಕಾಗಿರೋದು ಜನರ ಜವಾಬ್ದಾರಿ ಎಂದರು.
ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರ ಈ ಚಿತ್ರವು ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆ ಮತ್ತು ಅವರು ಎದುರಿಸುತ್ತಿರುವ ದೌರ್ಜನ್ಯಗಳನ್ನ ಬಗ್ಗೆ ಚಿತ್ರ ಆಧರಿಸಿದೆ. 11 ರಂದು ಚಿತ್ರ ತೆರೆಕಂಡಿದೆ. 1990ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನ ಆಧರಿಸಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಪತ್ನಿ ಮತ್ತು ನಟಿ ಪಲ್ಲವಿ ಜೋಶಿ ಮತ್ತು ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಶನಿವಾರ ಪ್ರಧಾನಿಯನ್ನು ಭೇಟಿ ಮಾಡಿದ್ದರು.






























