ಬೆಳಗಾವಿ: ಬೆಳ್ಳಂಬೆಳಗ್ಗೆ ಬೆಳಗಾವಿ ಬೆಚ್ಚಿ ಬಿದ್ದಿತ್ತು. ರಸ್ತೆಯಲ್ಲಿ ಹರಿದ ನೆತ್ತರು, ಅಲ್ಲಿದ್ದೋರನ್ನ ಒಂದು ಕ್ಷಣ ದಂಗಾಗಿಸಿತ್ತು. ಅಷ್ಟಕ್ಕೂ ಅಲ್ಲಿ ಕೊಲೆಯಾದಾತ ಬೇರೆ ಯಾರೂ ಅಲ್ಲ. ಕುಂದಾನಗರಿಯ ಬಿಲ್ಡರ್. ಈ ಬಿಲ್ಡರ್ ಮರ್ಡರ್ ಹಿಂದಿರೋ ಸ್ಟೋರಿನೇ ಭಯಾನಕ.
ವಾಕಿಂಗ್‌ಗೆ ಅಂತಾ ಹೋಗಿದ್ದಾತ ಹೆಣವಾಗಿ ಹೋಗಿದ್ದ. ಪೊಲೀಸರು ಬಂದು ನೋಡೋವರೆಗೂ ಅಲ್ಲಿದ್ದಾತ ಬಿಲ್ಡರ್ ಅಂತಾ ಗೊತ್ತೇ ಆಗಿರಲಿಲ್ಲ. ಬಂದು ಪರಿಶೀಲಿಸಿದಾಗಲೇ 45 ವರ್ಷದ ರಾಜು ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದು ತಿಳಿದಿದೆ. ಕೇಳಿದ ಜನ ದಂಗಾಗಿ ಹೋಗಿದ್ದಾರೆ.
ರಾಜು ದೊಡ್ಡಬೊಮ್ಮನ್ನವರ್. ಬೆಳಗಾವಿಯ ಬಿಲ್ಡರ್. ಒಬ್ಬರಲ್ಲ.. ಇಬ್ಬರಲ್ಲ ಮೂವರು ಹೆಂಡತಿಯರು ಇವನಿಗೆ. ವರ್ಷದ ಹಿಂದಷ್ಟೇ ಮೂರನೇ ಮದುವೆಯಾಗಿದ್ದ. ಸಂಸಾರದಲ್ಲಿ ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ, ಅದ್ಯಾರ ಸೇಡಿನಿಂದಾನೋ ಏನೋ, ಹಳೇ ದ್ವೇಷಕ್ಕೆ ರಾಜು ಬೆಳ್ಳಂಬೆಳ್ಳಗ್ಗೆ ಕೊಲೆಯಾಗಿ ಹೋಗಿದ್ದಾನೆ. ರಾಜು ವಾಕಿಂಗ್‌ಗೆ ಅಂತಾ ತೆರಳಿದ್ದಾಗ ಬೈಕ್‌ನಲ್ಲಿ ಬಂದ ಯಾರೋ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಹಲವಾರು ಕಡೆ ಅಪಾರ್ಟ್‌ಮೆಂಟ್ ನಿರ್ಮಾಣದ ಹೆಸರಲ್ಲಿ ಮೃತ ರಾಜು ವಂಚಿಸಿರುವ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೇ ಮನೆ ಕಟ್ಟಿಕೊಡೋದಾಗಿ ಹೇಳಿ ಹಣ ಪಡೆದು ಕೈ ಫ್ರಾಡ್ ಮಾಡಿದ್ದಾಗಿ ಹೇಳಲಾಗ್ತಿದೆ. ಮೃತ ರಾಜು ಮೂವರ ಜೊತೆ ಅಧಿಕೃತವಾಗಿ ಮದುವೆಯಾಗಿದ್ದು, ಒಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ನಾಲ್ವರಿಗೂ ಬೇರೆ ಬೇರೆ ಮನೆ ಮಾಡಿ ಕೊಟ್ಟಿದ್ದಾನೆ.
1 ವರ್ಷದ ಹಿಂದೆ ಮೂರನೇ ಹೆಂಡತಿ ಜೊತೆ ಮದುವೆಯಾಗಿದ್ದು, ಆಕೆ ಈಗ ಗರ್ಭಿಣಿಯಾಗಿದ್ದಾಳೆ. ಸಂಸಾರ ಏನೋ ಚೆನ್ನಾಗಿತ್ತು. ಆದ್ರೆ, ಎರಡನೇ ಹೆಂಡತಿ ಜೊತೆ ಆಸ್ತಿ ವಿಚಾರಕ್ಕಾಗಿ ಆಗಾಗ ರಾಜು ಜಗಳ ಆಡುತ್ತಿದ್ದ. ರಾಜು ಕೊಲೆಯಾಗಿದ್ದು, ಆರೋಪಿಗಳಾರು ಅಂತಾ ಇನ್ನೂ ಗೊತ್ತಾಗಿಲ್ಲ. ಸಿಸಿಟಿವಿ ಕ್ಯಾಮೆರಾ ಆಧರಿಸಿ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕೊಲೆಗೆ ಕಾರಣವೇನು.? ಕೊಲೆಗಾರರು ಯಾರು..? ಕೊಂದಿದ್ದಾರು ಯಾಕೆ..? ಎಲ್ಲವೂ ಪ್ರಶ್ನೆ. ಇದೇ ಪ್ರಶ್ನೆಗಳನ್ನಿಟ್ಟುಕೊಂಡು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರ ಆರೋಪಿಗಳನ್ನ ಬಂಧಿಸುವ ನಿರೀಕ್ಷೆಯಲ್ಲಿದ್ದಾರೆ.





























