ಮಂಗಳೂರು: ಕೋಳಿಗಳ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ರಾಜ್ಯಾದ್ಯಂತ ಕೋಳಿ ಮಾಂಸ ದುಬಾರಿಯಾಗಿದೆ. ಕೋಳಿ ಮಾಂಸದ ಖಾದ್ಯಗಳ ಬೆಲೆಯೂ ಹೆಚ್ಚಳವಾಗಿದ್ದು, ಕೋಳಿ ಮಾಂಸ ಪ್ರಿಯರ ಕಿಸೆಗೆ ಕತ್ತರಿ ಹಾಕಿದೆ.
ಫಾರಂಗಳಲ್ಲಿಯೇ 1 ಕೆ.ಜಿ. ಕೋಳಿಯ ಬೆಲೆ 125 ರೂ. ಇದ್ದು, ಮಾರುಕಟ್ಟೆಯಲ್ಲಿ 180ರಿಂದ 185 ರೂ. ಇದೆ. ಒಂದು ವಾರದ ಅವಧಿಯಲ್ಲಿ ಕೆ.ಜಿ.ಗೆ 50ರಿಂದ 55 ರೂ. ಏರಿಕೆಯಾಗಿದೆ.
ಕೋಳಿ ಆಹಾರ ದುಬಾರಿ ಕಾರಣ :
ಕೋಳಿ ಮಾಂಸದ ಬೆಲೆ ಏರಿಕೆಯಾಗಲು ಕೋಳಿ ಆಹಾರ ದುಬಾರಿಯಾಗಿರುವುದು ಮುಖ್ಯ ಕಾರಣ. ಕೋಳಿ ಆಹಾರ ತಯಾರಿಸಲು ಬಳಕೆಯಾಗುವ ಜೋಳ ಮತ್ತು ಸೋಯಾ ಬೆಲೆ ಏರಿಕೆಯಾಗಿದೆ. ಹಾಗಾಗಿ ಕೋಳಿ ಆಹಾರದ ಬೆಲೆ ಸುಮಾರು ಶೇ. 50ರಷ್ಟು ಹೆಚ್ಚಳವಾಗಿದೆ. ಜತೆಗೆ ಔಷಧದ ಬೆಲೆಯೂ ಏರಿಕೆಯಾಗಿದೆ. 2-3 ವಾರಗಳ ಹಿಂದೆ 1 ಕೆ.ಜಿ. ಕೋಳಿ ಆಹಾರಕ್ಕೆ 22 ರೂ. ಇತ್ತು. ಈಗ 40 ರೂ.ಗೇರಿದೆ. ಈಗ ಸೆಕೆ ಅಧಿಕ ಇರುವುದರಿಂದ ಕೋಳಿ ಸಾಕಾಣಿಕೆಗೆ ಸ್ಥಳಾವಕಾಶವೂ ಅಧಿಕ ಬೇಕಾಗುತ್ತದೆ. ಜತೆಗೆ ಸಾಕಣೆದಾರರು ಹೆಚ್ಚು ವಯಸ್ಸಾದ ಕೋಳಿಗಳನ್ನು ವಿಲೇವಾರಿ ಮಾಡಿದ್ದಾರೆ.
ಈ ಎಲ್ಲ ಕಾರಣಗಳಿಂದ ಕೋಳಿ ಉತ್ಪಾದನೆ ತುಸು ಕುಂಠಿತವಾಗಿದೆ. ರಾಜ್ಯದಲ್ಲಿ 1 ತಿಂಗಳ ಹಿಂದೆ ವಾರಕ್ಕೆ 1.5 ಕೋಟಿ ಮಾಂಸದ ಕೋಳಿಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ ಅದು 80 ಲಕ್ಷಕ್ಕೆ ಕುಸಿದಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದ್ದರಿಂದ ಮಾಂಸ ದುಬಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಉತ್ಪಾದಕರ ಸಂಘದ ಅಧ್ಯಕ್ಷ ಡಾ. ಸುಶಾಂತ್ ರೈ ಮಾಹಿತಿ ನೀಡಿದ್ದಾರೆ.