ಮಂಗಳೂರು: ನಗರದ ಹೊರವಲಯದ ಕೈಕಂಬದ ಕಂದಾವರ ಎಂಬಲ್ಲಿ ಕೋಡ್ದಬ್ಬು ದೈವಸ್ಥಾನಕ್ಕೆ ರಾತ್ರಿ ವೇಳೆ ಅಕ್ರಮವಾಗಿ ಪ್ರವೇಶ ಮಾಡಿ ಅನ್ಯಕೋಮಿನ ವ್ಯಕ್ತಿ ವಿಕೃತಿ ಮೆರೆದಿರುವ ಘಟನೆ ನಡೆದಿದ್ದು, ಆತನನ್ನು ಬಜ್ಪೆ ಪೊಲೀಸರು ದೂರು ದಾಖಲಾದ ಕೆಲವೇ ಕ್ಷಣದಲ್ಲಿ ಬಂಧಿಸಿದ್ದಾರೆ.
ಕಂದಾವರ ಚರ್ಚ್ ಬಳಿ ನಿವಾಸಿ ಸಾಹುಲ್ ಹಮೀದ್(27) ಬಂಧಿತ ಆರೋಪಿ.
ಕಂದಾವರ ಪದವು ಶ್ರೀ ಕೋಡ್ದಬ್ಬು ದೈವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸಾಹುಲ್ ಹಮೀದ್ ರಾಹುಗುಳಿಗ ದೈವದ ಕಲ್ಲಿನಲ್ಲಿ ಉರಿಯುತ್ತಿದ್ದ ದೀಪವನ್ನು ನಂದಿಸಿದ್ದಾನೆ. ಅಲ್ಲದೆ ಈತ ತನ್ನ ಕೈಗೆ ಗಾಯ ಮಾಡಿಕೊಂಡು ದೈವಸ್ಥಾನಕ್ಕೆ ಪ್ರವೇಶಿಸಿರುವುದಾಗಿ ತಿಳಿದು ಬಂದಿದೆ. ಆ ಗಾಯದಲ್ಲಿ ಸುರಿಯುವ ರಕ್ತವನ್ನು ರಾಹುಗುಳಿಗನ ಕಲ್ಲಿಗೆ ಸುರಿಸಿದ್ದಾನೆ. ಅಲ್ಲದೆ ದೈವಸ್ಥಾನದ ಬಲ ಬದಿಯಲ್ಲಿರುವ ಆಯದ ಕಲ್ಲಿಗೂ, ದೈವಸ್ಥಾನದ ಅಂಗಣದ ಸುತ್ತಲೂ ರಕ್ತ ಸುರಿಸಿದ್ದಾನೆ.
ಈ ಮೂಲಕ ಆರೋಪಿ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ, ನಂಬಿಕೆಗೆ ಧಕ್ಕೆ ತಂದಿರುವುದಾಗಿ ದೈವಸ್ಥಾನದ ಅಧ್ಯಕ್ಷ ಬಜ್ಪೆ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಾದ ಒಂದೇ ಗಂಟೆಯಲ್ಲೇ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.