ಶಿವಮೊಗ್ಗ: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹರ್ಷ ಕೊಲೆ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಯು ಎನ್ ಐಎ ತನಿಖೆಗೆ ವಹಿಸಿದೆ.
ಹಿಂದೂ ಸಂಘಟನೆಗಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ಸುಪರ್ದಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವೆ, ಶಿವಮೊಗ್ಗ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದರು.
ಎನ್ ಐಎ ಯು ನಂಬಿಕಸ್ಥ ಏಜೆನ್ಸಿಯಾಗಿದ್ದು, ಎನ್‌ಐಎ ತನಿಖೆಗೊಪ್ಪಿಸಿದರೆ ಹರ್ಷ ಕುಟುಂಬಸ್ಥರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗೃಹ ಇಲಾಖೆಯು ಈ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಿದೆ.
ರಾಷ್ಟ್ರೀಯ ತನಿಖಾ ದಳವು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲು ಮಾಡಿಕೊಂಡಿದ್ದು, ಶೀಘ್ರ ತನಿಖೆ ಆರಂಭವಾಗಲಿದೆ.
ಹಿಂದೂ ಸಂಘಟನೆಗಳ ಕಾರ್ಯಕರ್ತ ಹರ್ಷನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ನಡೆಸಿದ್ದರು. ಈ ಪ್ರಕರಣವು ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದಲ್ಲದೆ, ಆರೋಪಿಗಳ ಶೀಘ್ರ ಪತ್ತೆಗಾಗಿ ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದರು.




























