ಬಂಟ್ವಾಳ: ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಒತ್ತಾಯಿಸಿ ವೃದ್ದ ತಾಯಿಗೆ ಮಗನೊಬ್ಬ ದೊಣ್ಣೆಯಿಂದ ಹಲ್ಲೆ ನಡೆಸಿ, ಕೂಡಿ ಹಾಕಿ ಜೀವಬೆದರಿಕೆ ಹಾಕಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಪ್ಪಿ(62) ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನಿದ್ದಾರೆ. ಹೆಣ್ಣು ಮಕ್ಕಳಿಗೆ ಈಗಾಗಲೇ ಮದುವೆಯಾಗಿರುತ್ತದೆ. ಮಗ ನವೀನನು ತನ್ನ ಸಂಸಾರದೊಂದಿಗೆ ಕುರಿಯಾಳದಲ್ಲಿ ಪ್ರತ್ಯೇಕ ಮನೆ ಮಾಡಿದ್ದಾನೆ. ಅಪ್ಪಿ ಅವರು ತಮ್ಮ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಅಪ್ಪಿ ಹೆಸರಿನಲ್ಲಿ 3.20 ಎಕ್ರೆ ಪಟ್ಟಾ ಜಾಗ ಹಾಗೂ ಸುಮಾರು 5 ಎಕ್ರೆ ಕುಮ್ಕಿ ಜಾಗಿವಿದೆ.
ಅದರಲ್ಲಿ ಬೆಳೆದ ಅಡಿಕೆ ಗಿಡಗಳನ್ನು ಹಾಗೂ ಜಾಗವನ್ನೂ ಮಗ ನವೀನ ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದನು. ಇದನ್ನು ಅರಿತ ಹೆಣ್ಣು ಮಕ್ಕಳು ಪಾಲು ಮಾಡಲು ಬಂಟ್ವಾಳ ಸಿವಿಲ್ ನ್ಯಾಯಾಲಯಲ್ಲಿ ದಾವೆ ಹೂಡಿದ್ದರು. ಅದರಂತೆ ನ್ಯಾಯಾಲಯ ಮಾ. 26 ರಂದು ತಾಯಿ ಅಪ್ಪಿ ಹಾಗೂ ಎಲ್ಲಾ ಮಕ್ಕಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
ಇದರಿಂದ ಮನಸ್ತಾಪಗೊಂಡ ಮಗ ನವೀನ ನಿನ್ನೆ (ಮಾ.25ರಂದು) ಬೆಳಿಗ್ಗೆ 9.30 ಗಂಟೆಗೆ ಅಪ್ಪಿ ಮನೆಗೆ ಬಂದು ಕೈಯಲ್ಲಿ ಮರದ ದೊಣ್ಣೆ ಹಿಡಿದುಕೊಂಡು ಮನೆಯ ಒಳಗೆ ಹೋಗಿ ತಾಯಿಗೆ ಬಲಕೈ, ಕೋಲು ಕೈಗೆ, ಬಲ ಭುಜಕ್ಕೆ ಹೊಡೆದಿದ್ದಾರೆ. ಎರಡು ದಿನಗಳ ಹಿಂದೆ ಮನೆಗೆ ಬಂದ ಮಗಳು ಜಯಂತಿಯು ಗಲಾಟೆ ತಡೆಯಲು ಹೋದಾಗ ಅವರಿಗೂ ಕೂಡ ಎಡ ಕೈ ರಟ್ಟೆಗೆ, ಮಣಿಗಂಟಿಗೆ, ಹೆಬ್ಬೆರಳಿಗೆ ಬೆನ್ನಿನ ಬಲ ಬದಿಗೆ, ಎಡ ಕಾಲಿನ ಮೊಣಗಂಟಿಗೆ ಹೊಡೆದಿದ್ದಾರೆ.
ನಂತರ ಇಬ್ಬರನ್ನೂ ದೂಡಿ ಹಾಕಿ ನಿಮ್ಮನ್ನು ಈ ಜಾಗ, ಮನೆಯಲ್ಲಿ ಜೀವಂತವಾಗಿ ಬದುಕಲು ಬಿಡುವುದಿಲ್ಲ ಎಂದು ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 26/2022 ಕಲಂ 324.504.506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.