ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬರುವ ಯಾತ್ರಿಕರು ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ಬ್ಯಾಗ್ ಇಟ್ಟಾಗ ಅದರಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡಲಾಗಿದ್ದು ಈ ಕುರಿತು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಮಾಡಿ ಆರೋಪಿ ಹಾಗೂ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಶ್ರೀಧರ ನಾಯರಿ ಎಂಬವರು ಸ್ನಾನ ಮಾಡಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ತಮ್ಮ ಚಿನ್ನಾಭರಣ ಹಾಗೂ ಹಣ ಇದ್ದ ಬ್ಯಾಗ್ ಇಟ್ಟಿದ್ದರು. ಈ ವೇಳೆ ಯಾರೋ ಕಳ್ಳರ ಪಾಲಾಗಿತ್ತು. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಷಾರೆ ಗ್ರಾಮದ ಇಂದಿರಾನಗರದ ನಿವಾಸಿ ಮಿತುನ್ ಚೌವ್ಹಾಣ್ (31) ಸಿಕ್ಕಿ ಬಿದ್ದಿದ್ದಾನೆ. ಆತನ ಬಳಿಯಿದ್ದ 80,000/- ಮೌಲ್ಯದ 37 ಗ್ರಾಂನ ಚಿನ್ನದ ಓಲೆ, 32,000/- ಮೌಲ್ಯದ 8.04 ಗ್ರಾಂ ನ ಲಕ್ಷ್ಮೀ ಮಾಲೆ, 16,230 ಮೌಲ್ಯದ ಚಿನ್ನದ ಸರ, 40,000/- ಮೌಲ್ಯದ 10.2 ಗ್ರಾಂ ನ ಬ್ರೇಸ್ ಲೈಟ್ , 15,000/- ಮೌಲ್ಯದ ಬ್ರೇಸ್ ಲೈಟ್ , 8,500/- ಮೌಲ್ಯದ 2.190 ಗ್ರಾಂ ನ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 2.4 ಲಕ್ಷ ಆಗಿರುತ್ತದೆ.
ಆರೋಪಿ ದೇಶದ ವಿವಿಧ ಪ್ರಸಿದ್ಧ ಯಾತ್ರಾ ಸ್ಥಳಗಳಿಂದ ಕಳ್ಳತನ ಮಾಡುವ ಅಭ್ಯಾಸ ಹೊಂದಿದ್ದು, ಈತನ ಮೇಲೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಇದೀಗ ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಕ್ಷಿಣ ಕನ್ನಡ ಪೊಲಿಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆ ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷರು ಬಂಟ್ವಾಳ ಉಪವಿಭಾಗದ ಪ್ರತಾಪ್ ಸಿಂಗ್ ತೋರಟ್ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ನೇತ್ರತ್ವದಲ್ಲಿ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಅವರ ವಿಶೇಷ ತಂಡದ ಸಿಬ್ಬಂದಿ ಬೆನ್ನಿಚ್ಚನ್ ,ಪ್ರಶಾಂತ್ ,ರಾಹುಲ್, ಸತೀಶ್ ನಾಯ್ಕ್ ,ವಿಜು, ರವೀಂದ್ರ , ಕೃಷ್ಣಪ್ಪ ಹಾಗೂ ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ ಹಾಗೂ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.