ಹೈದರಾಬಾದ್: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವೃದ್ಧರೊಬ್ಬರು ಒಂದು ರಾತ್ರಿಯಿಡೀ ಬ್ಯಾಂಕ್ ಲಾಕರ್‌ನಲ್ಲಿ ಸಿಲುಕಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಕೃಷ್ಣಾ ರೆಡ್ಡಿ(85) ಲಾಕರ್‌ನಲ್ಲಿ ಕಳೆದ ವೃದ್ಧ. ಇವರು ಮಧುಮೇಹ ಹಾಗೂ ಇತರ ರೋಗದಿಂದ ಬಳಲುತ್ತಿದ್ದು, ಸತತ 18 ಗಂಟೆಗಳ ಕಾಲ ಲಾಕರ್‌ನಲ್ಲಿ ಕಳೆಯ ಬೇಕಾದ ಪರಿಸ್ಥಿತಿ ಎದುರಾಗಿದೆ.
ಘಟನೆ ಏನು..??
ಜ್ಯುಬಿಲಿ ಹಿಲ್ಸ್‍ನ ನಿವಾಸಿ ಕೃಷ್ಣಾರೆಡ್ಡಿ ಅವರು ಕೆಲವು ದಾಖಲೆಗಳನ್ನು ಪಡೆದುಕೊಳ್ಳಲು ಬಂಜಾರ ಹಿಲ್ಸ್ ಪ್ರದೇಶದ ಯೂನಿಯನ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದರು. ಇವೆಲ್ಲದರ ಪರಿಶೀಲನೆಯ ನಂತರ ಅವರನ್ನು ಬ್ಯಾಂಕ್ ಲಾಕರ್ ರೂಂಗೆ ಕಳುಹಿಸಲಾಯಿತು.
ಬ್ಯಾಂಕ್ ಮುಚ್ಚುವ ಸಮಯವಾಗಿದೆ ಎನ್ನುವ ವಿಷಯವನ್ನು ಕೃಷ್ಣಾ ರೆಡ್ಡಿ ಗಮನಿಸಿರಲಿಲ್ಲ. ಮತ್ತೊಂದೆಡೆ ಕೃಷ್ಣಾ ರೆಡ್ಡಿ ಬ್ಯಾಂಕ್ ಲಾಕರ್‍ನಲ್ಲಿರುವುದು ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ಬಾರದೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ.
ರಾತ್ರಿಯಾದರೂ ಕೃಷ್ಣಾ ರೆಡ್ಡಿ ಮನೆಗೆ ಬಾರದ ಕಾರಣ ಅವರ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಅವರನ್ನು ಪತ್ತೆ ಹೆಚ್ಚಿದ್ದಾರೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಕೃಷ್ಣಾ ರೆಡ್ಡಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.