ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಬಿಟ್ಟಾ ಕರಾಟೆಯ ವಿರುದ್ಧ 31 ವರ್ಷದ ಹಿಂದೆ ನಡೆದ ಪ್ರಕರಣದ ವಿಚಾರಣೆ ನಡೆಸುವಂತೆ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ ವಿರುದ್ಧ ಮೃತ ಕಾಶ್ಮೀರಿ ಪಂಡಿತ ಸತೀಶ್ ಟಿಕ್ಕೂ ಅವರ ಕುಟುಂಬವು 31 ವರ್ಷಗಳ ಬಳಿಕ ಮರು ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಬಿಟ್ಟಾ ಕರಾಟೆ ಆಜಾದಿ ಹೆಸರಲ್ಲಿ ಪ್ರಾರಂಭಿಸಿದ್ದ ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಮೊದಲು ಬಲಿಯಾಗಿದ್ದು ಸತೀಶ್ ಟಿಕ್ಕೂ. ಈತ ಬಿಟ್ಟಾನ ಬಾಲ್ಯದ ಸ್ನೇಹಿತನಾಗಿದ್ದ. ಸತೀಶ್ ಟಿಕ್ಕೂ ಅವರನ್ನು ಕೊಲೆ ಮಾಡಿರುವುದಾಗಿ ಬಿಟ್ಟಾ ಖಾಸಗಿ ಚಾನೆಲ್‍ಗೆ ಸಂದರ್ಶನ ನೀಡಿದ್ದ ವೇಳೆ ಒಪ್ಪಿಕೊಂಡಿದ್ದ. ಈ ಸಾಕ್ಷಿಯನ್ನು ಇಟ್ಟುಕೊಂಡು ಕುಟುಂಬ ಕೋರ್ಟ್ ಮೆಟ್ಟಿಲೇರಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ಶ್ರೀನಗರದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 16ರೊಳಗೆ ಸಂದರ್ಶನದ ಹಾಡ್ ಕಾಪಿಯನ್ನು ಸಲ್ಲಿಸುವಂತೆ ಟಿಕೂ ಕುಟುಂಬದ ವಕೀಲ ಉತ್ಸವ್ ಬೈನ್ಸ್‍ಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ.
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ದುಃಸ್ಥಿತಿಯನ್ನು ತೋರಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ಬೆನ್ನೆಲ್ಲೇ ಈ ಅರ್ಜಿ ಸಲ್ಲಿಸಲಾಗಿದೆ. ಕಳೆದ 31 ವರ್ಷಗಳ ನಂತರದಲ್ಲಿ ಬಿಟ್ಟಾ ಕರಾಟೆ ವಿರುದ್ಧ ಮೊದಲ ಅರ್ಜಿಯಾಗಿದೆ.
ಘಟನೆಯೇನು?: ಆಜಾದಿ ಹೆಸರಲ್ಲಿ ಬಿಟ್ಟಾ ಅಲ್ಲಿನ ಕಾಶ್ಮೀರಿ ಪಂಡಿತರ ಮಾರಣ ಹೋಮವನ್ನು ಮಾಡಲು ಪ್ರಾರಂಭಿಸಿದ. ಇವನ ಹಿಂಸಾಚಾರಕ್ಕೆ ಮೊದಲು ಬಲಿಯಾಗಿದ್ದೇ ಕಾಶ್ಮೀರಿ ಪಂಡಿತನಾಗಿದ್ದ ಆತನ ಬಾಲ್ಯದ ಗೆಳೆಯ. ಬಿಟ್ಟಾ ಆತನನ್ನು ತನ್ನ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಿದ್ದ.
1980-1990ರಲ್ಲಿ ಇವರು ಪಂಡಿತರನ್ನು ಹುಡುತ್ತಾ ಶ್ರೀನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಪಂಡಿತರೆಂದು ತಿಳಿದ ತಕ್ಷಣ ಆತ ತನ್ನಲ್ಲಿದ್ದ ಪಿಸ್ತೂಲ್‍ನಿಂದ ಗುಂಡಿಕ್ಕಿ ಕೊಲ್ಲುತ್ತಿದ್ದ. ಕನಿಷ್ಠ 20 ಕಾಶ್ಮೀರಿ ಪಂಡಿತರನ್ನು ಕೊಂದಿದ್ದೇನೆ ಎಂದು ವಿಡಿಯೋ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ.
ಘಟನೆಗೆ ಸಂಬಂಧಿಸಿದಂತೆ ಭಾರತೀಯ ಸೈನಿಕರು ಬಿಟ್ಟಾನನ್ನು 1990ರ ಜೂನ್‍ನಲ್ಲಿ ಬಂಧಿಸಿದರು. 2006ರವರೆಗೆ ಅಂದರೆ 16 ವರ್ಷಗಳ ಕಾಲ ಆತ ಸೆರೆಮನೆಯಲ್ಲಿದ್ದ. 2006ರಲ್ಲಿ ಜಾಮೀನಿನ ಮೇಲೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಟಾಡಾ ಜಡ್ಜ್ ಎನ್‍ಡಿ ವಾಣಿ ಅವರು, ಆರೋಪಿ ಮಾಡಿರುವ ಅಪರಾಧಗಳು ಗಂಭೀರವಾದದ್ದು ಎಂದು ನ್ಯಾಯಾಲಯಕ್ಕೆ ತಿಳಿದಿದೆ. ಈ ಅಪರಾಧಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ನೀಡಬೇಕಿತ್ತು. ಆದರೆ ಪ್ರಾಸಿಕ್ಯೂಶನ್ ಆರೋಪ ಸಾಬೀತು ಪಡಿಸಲು ವಿಫಲವಾಗಿದೆ ಮತ್ತು ಪ್ರಕರಣ ಭೇದಿಸಲು ಸಂಪೂರ್ಣ ನಿರಾಸಕ್ತಿ ತೋರಿಸಿದೆ ಎಂದಿದ್ದರು. ಹೀಗಾಗಿ 2006ರ ಅಕ್ಟೋಬರ್‌ನಲ್ಲಿ ಬಿಟ್ಟಾಗೆ ಜಾಮೀನು ಸಿಕ್ಕಿತ್ತು.