ಸುಳ್ಯ: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗವಾದ ಸುಳ್ಯ ತಾಲೂಕಿನ ಸಂಪಾಜೆ ಬಳಿ ಹತ್ತು ದಿನಗಳ ಹಿಂದೆ ರಾತ್ರಿ ವೇಳೆ ಮನೆಯೊಂದಕ್ಕೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಅಲ್ಲಿದವರನ್ನು ಬೆದರಿಸಿ ಚಿನ್ನ ಹಾಗೂ ನಗದನ್ನು ದೋಚಿದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಜ್ಯೋತಿಷ್ಯ ಹಾಗೂ ಪೌರೋಹಿತ್ಯ ವೃತ್ತಿ ಮಾಡುವ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಚಟ್ಟೆಕಲ್ಲು ನಿವಾಸಿ ಅಂಬರೀಶ್ ಎಂಬವರ ಮನೆಗೆ ಮಾ.21 ರಂದು ರಾತ್ರಿ ಮಾರಕಾಯುದಗಳೊಂದಿಗೆ ಮುಸುಕುಧಾರಿ ದರೋಡೆಕೋರರ ತಂಡ ನುಗ್ಗಿತ್ತು.
ತಮಿಳು ನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣೂರು ತಾಲೂಕಿನ ಕಾರ್ತಿಕ್ ಟಿ. (38 ), ಹಾಸನದ ಚಿಕ್ಕಬುವನಹಳ್ಳಿ ಹೋಬಳಿಯ ಮಧುಕುಮಾರ್ (33) ಹಾಸನದ ವಿದ್ಯಾನಗರ ನಿವಾಸಿ ದೀಕ್ಷಿತ್ ಕೆ.ಎನ್ (26) ಹಾಗೂ ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಬಿ. ನರಸಿಂಹನ್ (40) ಬಂಧಿತರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ 4 ಮಂದಿ ದರೋಡೆಕೋರರನ್ನು ಬಂಧಿಸಿದ ಸುಳ್ಯ ಪೊಲೀಸರ ತಂಡ ಆರೋಪಿಗಳ ಬಳಿಯಿಂದ ಒಂದು ಲಕ್ಷ 20 ಸಾವಿರ ರೂಪಾಯಿ ನಗದು ಹಾಗು ಕೃತ್ಯಕ್ಕೆ ಬಳಸಿದ ವಾಹನ, ಮೊಬೈಲ್ ಸಹಿತ ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾ. 21 ರಂದು ಸಂಜೆ ಅಂಬರೀಶ್ ಭಟ್ ಪುತ್ರ ಶ್ರೀವತ್ಸ ಜೊತೆ ಮದೆನಾಡು ಗ್ರಾಮಕ್ಕೆ ಕೆಲಸದ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಅಂಬರೀಶ್ ಭಟ್ ಪತ್ನಿ ಪುಷ್ಪಾ, ಸೊಸೆ ಆಶಾ, ತಂದೆ ಗೋವಿಂದ ಭಟ್, ತಾಯಿ ಸರಸ್ವತಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು.
ಈ ಸಂದರ್ಭದಲ್ಲಿ ಮನೆಗೆ ಬಂದ ದರೋಡೆ ಕೋರರು ಮನೆಯವರನ್ನು ಬೆದರಿಸಿ ಗೋಡ್ರೇಜ್ನಲ್ಲಿದ್ದ 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ, 1.50 ಲಕ್ಷ ರೂ.ನಗದು, ಒಂದು ಮೊಬೈಲ್ ಅನ್ನು ದೋಚಿದ್ದರು.