ಬೆಳ್ತಂಗಡಿ: ಹತ್ಯೆಗೀಡಾದ ದಿನೇಶ್ ಕನ್ಯಾಡಿಗೆ ನ್ಯಾಯ ದೊರಕಿಸಿಕೊಡಿ ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಬೆಳ್ತಂಗಡಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮಂಗಳೂರಿನ ಕಚೇರಿಗೆ ಬೃಹತ್ ಜಾಥಾ ಮಾರ್ಚ್ 29 ರಂದು ನಡೆದಿತ್ತು. ಆದರೆ ಇದೀಗ ಕಾನೂನುಬಾಹಿರವಾಗಿ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿ ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ಕಾರಣರಾಗಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ನಿಷೇಧಾಜ್ಞೆ ಇದ್ದರೂ ಕೂಡಾ ಕಾರ್ಯಕರ್ತರು ಅಕ್ರಮ ಕೂಟ ಸೇರಿ ಮೆರವಣಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳ್ತಂಗಡಿ ತಾಲೂಕು ತಹಶೀಲ್ದಾರ ಮಹೇಶ್ ಜೆ ಅವರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಅವರು ಜಿಲ್ಲೆಯಲ್ಲಿ ನಿಷೇಧಾಜ್ಞೆ ಘೋಷಿಸಿದ್ದರೂ, ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಮಾ.29 ರಂದು ಬೆಳಿಗ್ಗೆ 10 ಗಂಟೆಯಿಂದ ಎಸ್.ಡಿ.ಪಿ.ಐ ಮುಖಂಡರು ಹಾಗೂ ಕಾರ್ಯಕರ್ತರು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪಿಕಪ್ ವಾಹನದಲ್ಲಿ ಧ್ವನಿವರ್ಧಕ ಉಪಯೋಗಿಸಿ, ಪಾದಯಾತ್ರೆ ಮುಖೇನ ಮೆರವಣಿಗೆ ನಡೆಸಿ ಕಾನೂನನ್ನು ಉಲ್ಲಂಘಿಸಿದ್ದಾರೆ. ಬಳಿಕ ಈ ಕಾಲ್ನಡಿಗೆ ಜಾಥಾ ಮಂಗಳೂರಿನಲ್ಲೂ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.