ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಶುರುವಾದ ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಾಗಾಲೋಟ ಮುಂದುವರಿದಿದೆ. 12 ದಿನಗಳ ಅವಧಿಯಲ್ಲಿ 10 ಬಾರಿ ತೈಲ ದರ ಪರಿಷ್ಕರಣೆ ಆಗಿದೆ. ಬೆಲೆ ಏರಿಕೆ ಬರೆಗೆ ಶ್ರೀಸಾಮಾನ್ಯ ಬೆಚ್ಚಿಬಿದ್ದಿದ್ದಾನೆ. ದರಪ್ರಹಾರ ಹೀಗೆ ಮುಂದುವರಿದ್ರೆ ದುಬಾರಿ ದುನಿಯಾದಲ್ಲಿ ಹೇಗಪ್ಪ ಜೀವನ ನಡೆಸೋದು ಅಂತಾ ಚಿಂತೆಯ ಬಲೆಗೆ ಸಿಲುಕಿ ಒದ್ದಾಡುವಂತಾಗಿದೆ.
ಒಂದೆಡೆ ವಸ್ತ್ರ, ವ್ಯಾಪಾರ ಹಾಗೂ ಆಹಾರ ಸಮರಗಳು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ರೆ ಮತ್ತೊಂದೆಡೆ ಏರಿಕೆಯಾಗ್ತಿರೋ ಪೆಟ್ರೋಲ್, ಡೀಸೆಲ್ ದರ ಸಾರ್ವಜನಿಕರ ಬದುಕು ಹೈರಾಣಾಗಿಸುತ್ತಿವೆ. ಪಂಚರಾಜ್ಯಗಳ ಚುನಾವಣೆ ಮುಗಿದಿದ್ದೇ ಮುಗಿದಿದ್ದು, ಬೆಲೆ ಏರಿಕೆಯ ಪಂಚ್ ಜನರನ್ನು ಕಂಗೆಡಿಸಿದೆ. ಮಾರ್ಚ್22 ರಿಂದ ನಿರಂತರವಾಗಿ ತೈಲ ದರ ಏರಿಕೆಯಾಗ್ತಿದ್ದು, ಇಂದು ಮತ್ತೊಮ್ಮೆ ಪೆಟ್ರೋಲ್ ಹಾಗೂ ಡೀಸೆಲ್ ತಮ್ಮ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಶಾಕ್ ನೀಡಿವೆ.
ಇಂದು ಮತ್ತೆ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ 80ಪೈಸೆಯಷ್ಟು ಹೆಚ್ಚಳವಾಗಿದೆ. ಈ ಮೂಲಕ ತೈಲ ಮತ್ತಷ್ಟು ತುಟ್ಟಿಯಾಗಿದೆ. ಮಾರ್ಚ್ 22ರ ಬಳಿಕ ಒಟ್ಟು 10 ಬಾರಿ ತೈಲ ದರ ಪರಿಷ್ಕರಣೆ ಮಾಡಲಾಗಿದ್ದು, 12 ದಿನಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 7 ರೂಪಾಯಿ 20 ಪೈಸೆಯಷ್ಟು ಏರಿಕೆ ಕಂಡಿವೆ. ಇನ್ನು ಸರ್ಕಾರಗಳು ವಿಧಿಸುವ ತೆರಿಗೆ ಆಧರಿಸಿ ವಿವಿಧ ರಾಜ್ಯಗಳಲ್ಲಿ ತೈಲ ದರ ಬೇರೆ ಬೇರೆಯಾಗಿದೆ.