ಕಡಬ: ಸಿಕ್ಕಿಂ ರಾಜ್ಯದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ದ.ಕ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ವಾಸವಿದ್ದ ಯುವಕ ಹಾಗೂ ಅಪ್ರಾಪ್ತ ಬಾಲಕಿಯನ್ನು ಸಿಕ್ಕಿಂ ಪೊಲೀಸರು ಕಡಬಕ್ಕೆ ಬಂದು ವಶಕ್ಕೆ ಪಡೆದ ಘಟನೆ ನಡೆದಿದೆ.
ಸಿಕ್ಕಿಂ ರಾಜ್ಯದ ಸಿಂಗ್ಟಮ್ ಪೊಲೀಸ್ ಠಾಣೆಯಲ್ಲಿ ಜ. 28 ರಂದು ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಬಾಲಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಗೆ ಆಗಮಿಸಿದ ಸಿಕ್ಕಿಂ ಪೊಲೀಸ್ ಮಹಿಳಾ ಇನ್ಸ್ಪೆಕ್ಟರ್ ಶಿಲೋಶನ ಶರ್ಮಾ ನೇತೃತ್ವದ ಪೊಲೀಸರ ತಂಡ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮನಾಯ್ಕ್ ಅವರ ಸಹಕಾರದೊಂದಿಗೆ ಕಡಬದ ಕುಂತೂರು ಎಂಬಲ್ಲಿ ಬಾಲಕಿಯನ್ನು ಪತ್ತೆಹಚ್ಚಿ, ರಕ್ಷಣೆ ಮಾಡಿ ಬಾಲಕಿಯನ್ನು ಅಪರಿಹಿಸಿದ್ದ ಸುಶೀಲ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ಇವರು ಕಡಬದಲ್ಲಿ ಬಾಡಿಗೆ ಪಡೆಯುವ ವೇಳೆ ಯುವಕ ಬೆಂಗಳೂರು ಮೂಲದವನು ಹಾಗೂ ಹುಡುಗಿ ಕೋಲ್ಕತ್ತಾದವಳು ನಾವು ದಂಪತಿಗಳು ಎಂದು ಸುಳ್ಳು ಹೇಳಿ ಯಾವುದೇ ದಾಖಲೆ ಪತ್ರಗಳನ್ನು ನೀಡದೆ ಕುಂತೂರು ಕೋಚಕಟ್ಟೆಯಲ್ಲಿ ವಾಸ್ತವ್ಯಕ್ಕೆ ಕೊಠಡಿ ಬಾಡಿಗೆ ಪಡೆದುಕೊಂಡಿದ್ದರು.
ಯುವಕನು ಅಲ್ಲೇ ಹತ್ತಿರದ ಆಲಂಕಾರು ಎಂಬಲ್ಲಿ ಹೋಟೆಲ್ ಒಂದರಲ್ಲಿ ಫಾಸ್ಟ್ ಫುಡ್ ಕೆಲಸ ಮಾಡುತ್ತಿದ್ದನು.