ಬ್ರಹ್ಮಾವರ: ಚೇರ್ಕಾಡಿ ಗ್ರಾಮದ ಕನ್ನಾರಿನಲ್ಲಿ ನಡೆದ ಕಳವು ಪ್ರಕರಣವನ್ನು ಬ್ರಹ್ಮಾವರ ಪೊಲೀಸರು 24 ಗಂಟೆಯೊಳಗೆ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಪೆಜಮಂಗೂರು ಗ್ರಾಮ ಪ್ರಗತಿನಗರದ ಪ್ರಸ್ತುತ ಬೆಂಗಳೂರಿನಲ್ಲಿರುವ ಸುರೇಶ್ ಯಾನೆ ಸೂರ್ಯ ಯಾನೆ ಕಪಿ ಆರೋಪಿ.
ಕನ್ನಾರಿನ ಪ್ರೇಮಾ ಅವರು ಮನೆ ಹೊರಗೆ ಪಾತ್ರೆ ತೊಳೆಯುವಾಗ ಹಿಂಬದಿ ಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿ 10 ಗ್ರಾಂ ತೂಕದ ನೆಕ್ಲೇಸ್ ಕಳವುಗೈದಿದ್ದ. ಇದನ್ನು ನೋಡಿದ್ದ ಪ್ರೇಮಾ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಂತೆ ಪಿಎಸ್‌ಐ ಗುರುನಾಥ ಬಿ. ಹಾದಿಮನಿ ಹಾಗೂ ಮುಕ್ತಾಬಾಯಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕೂಡಲೇ ಕಾರ್ಯ ಪ್ರವೃತ್ತರಾದರು.ಯಾವುದೇ ತಾಂತ್ರಿಕ ಸಹಾಯವಿಲ್ಲದೆ ಕೇವಲ ಪೊಲೀಸ್ ಸಾಂಪ್ರದಾಯಿಕ ವಿಧಾನದಲ್ಲಿ ಸಾರ್ವಜನಿಕರಿಂದ ತಳಮಟ್ಟದ ಮಾಹಿತಿ ಸಂಗ್ರಹಿಸಿ, ಆರೋಪಿಯು ಕಳವು ಮಾಡಿದ ದಿನ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು ಆರೋಪಿಯನ್ನು ಪತ್ತೆ ಮಾಡಿ 50,000 ರೂ. ಬೆಲೆಬಾಳುವ ಚಿನ್ನದ ನೆಕ್ಲೇಸ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣ ಭೇದಿಸಿದಂತಾಗಿದೆ.