ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಣ್ಣದ ಲೋಕದಲ್ಲಿ ವೇಗದಲ್ಲಿ ಮುನ್ನುಗ್ಗುತ್ತಿದ್ದಾರೆ. ನಾನಾ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಪ್ರೇಕ್ಷಕರಿಂದ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಇಂದು (ಏಪ್ರಿಲ್ 5) ಅವರ ಜನ್ಮದಿನ. ಈ ಪ್ರಯುಕ್ತ ಅವರ ಹೊಸ ಸಿನಿಮಾ ಒಂದು ಘೋಷಣೆ ಆಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರು ಕಾಶ್ಮೀರಿ ಮುಸ್ಲಿಂ ಹುಡುಗಿ ಆಫ್ರೀನ್ (Afreen) ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಅವರ ಹೊಸ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಚರ್ಚೆ ಜೋರಾಗಿದೆ.
ರಶ್ಮಿಕಾ ಮಂದಣ್ಣ ಅವರು ಈ ವರೆಗೆ ಒಪ್ಪಿಕೊಂಡ ಬಹುತೇಕ ಪಾತ್ರಗಳು ಪಕ್ಕದ ಮನೆ ಹುಡುಗಿ ಪಾತ್ರಗಳ ರೀತಿಯಲ್ಲೇ ಇದ್ದವು. ವಿಜಯ್ ದೇವರಕೊಂಡ ನಟನೆಯ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಅವರು ಒಂದು ಭಿನ್ನ ರೋಲ್ ಮಾಡಿದ್ದರು. ಉಳಿದಂತೆ ಬಹುತೇಕ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹುಡುಗಿ ಪಾತ್ರಗಳೇ ಆಗಿವೆ. ಈಗ ಹನು ರಾಘವ ಪುಡಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಭಿನ್ನ ಗೆಟಪ್ ತಾಳಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂನ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೋಷನ್ ಪೋಸ್ಟರ್ನಲ್ಲಿ ರಶ್ಮಿಕಾ ಆಫ್ರೀನ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಹಿಜಾಬ್ ಧರಿಸಿರುವ ಅವರು, ಕೈಯಲ್ಲಿ ಬ್ಯಾಗ್ ಹಿಡಿದ್ದಾರೆ. ಸುಡುತ್ತಿರುವ ಕಾರುಗಳ ಮಧ್ಯೆ ಅವರು ನಡೆದು ಹೋಗುತ್ತಿದ್ದಾರೆ. ಲಂಡನ್ನ ಖ್ಯಾತ ಬಿಗ್ ಬೇನ್ ಗಡಿಯಾರ ಕೂಡ ಪೋಸ್ಟರ್ನಲ್ಲಿದೆ. ಈ ಎಲ್ಲಾ ಕಾರಣಕ್ಕೆ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.
‘ನಮ್ಮ ಆಫ್ರೀನ್ ಅವರನ್ನು ಭೇಟಿ ಮಾಡಿ’ ಎನ್ನುವ ಕ್ಯಾಪ್ಶನ್ನೊಂದಿಗೆ ಈ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ವೈಜಯಂತಿ ಮೂವೀಸ್ ಹಾಗೂ ಸ್ವಪ್ನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಹಾಗೂ ಪ್ರಿಯಾಂಕಾ ದತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ದುಲ್ಖರ್ ಅವರು ಲೆಫ್ಟಿನಂಟ್ ರಾಮ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಜೋಡಿಯಾಗಿ ಮೃನಲಾ ಠಾಕೂರ್ ನಟಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಬಳಿ ಹಲವು ಸಿನಿಮಾಗಳಿವೆ. ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಅವರು ಬ್ಯುಸಿ ಇದ್ದಾರೆ. ‘ಪುಷ್ಪ 2’ ಚಿತ್ರದ ಕೆಲಸಗಳು ಈಗಷ್ಟೇ ಆರಂಭಗೊಂಡಿವೆ. ಸಿದ್ದಾರ್ಥ್ ಮಲ್ಹೋತ್ರಾ ಜತೆಗಿನ ‘ಮಿಷನ್ ಮಜ್ನು’ ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿವೆ. ‘ಗುಡ್ಬೈ’ ಚಿತ್ರದ ಕೆಲಸಗಳು ಭರದಿಂದ ಸಾಗಿವೆ.