ತಿರುವನಂತಪುರ: ವಿಕಲಚೇತನ ವಿದ್ಯಾರ್ಥಿಯೋರ್ವನಿಗೆ ಇಬ್ಬರು ಸ್ನೇಹಿತರು ಸಹಾಯ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇರಳದ ಸಾಸ್ತಮಕೋಟಾದ ಡಿ ಬಿ ಕಾಲೇಜಿನ ಕ್ಯಾಂಪಸ್‌ನಲ್ಲಿ ವಿಕಲಚೇತನ ಯುವಕ ಅಲಿಫ್ ಮುಹಮ್ಮದ್‌ಗೆ ಇಬ್ಬರು ಸ್ನೇಹಿತರಾದ ಆರ್ಯ ಮತ್ತು ಅರ್ಚನಾ ಸಹಾಯ ಮಾಡುತ್ತಿರುವ ಪೊಟೋ ನೆಟ್ಟಿಗರ ಗಮನಸೆಳೆಯುತ್ತಿದೆ.
ದೈಹಿಕ ಅಂಗವಿಕಲತೆ ಹೊಂದಿರುವ ಅಲಿಫ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಇದರ ಪೋಸ್ಟ್ ಮಾಡಿದ್ದು “ನಿಮ್ಮ ಅದ್ಭುತ ಸ್ನೇಹಿತರೊಂದಿಗೆ ನೀವು ನೀರು ಕುಡಿದಾಗ, ಅದು ಸಿಹಿಯಾಗಿರುತ್ತದೆ” ಎಂದು ಶೀರ್ಷಿಕೆ ನೀಡಿದ್ದಾರೆ.
“ವಿದೇಶದಲ್ಲಿ ಕೆಲಸ ಮಾಡುತ್ತಿರುವ ತಾಯಿ ಜೀನತ್ ಹಾಗೂ ತಂದೆ ಶಾನವಾಸ್ ವಿಡಿಯೋ ಹಾಗೂ ಚಿತ್ರ ನೋಡಿ ಖುಷಿಪಟ್ಟಿದ್ದಾರೆ. ನನ್ನ ಜೀವನ ಯಾವಾಗಲೂ ನನ್ನ ಸ್ನೇಹಿತರ ಜೊತೆಯಲ್ಲಿದೆ. ನಾನು ನನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತೇನೆ. ಕಾಲೇಜಿನಲ್ಲೂ ಓಡಾಡಲು ಅವರು ನನಗೆ ನಿತ್ಯ ನೆರವಾಗುತ್ತಾರೆ. ಕೀಳರಿಮೆ ಕಾಡುವಂತೆ ಎಂದಿಗೂ ನನ್ನ ಸ್ನೇಹಿತರು ವರ್ತಿಸುವುದಿಲ್ಲ. ಸ್ನೇಹಿತರ ಸಹಾನುಭೂತಿಯ ಎಂದಿಗೂ ನನ್ನ ಜೊತೆ ಇದೆ. ಅವರೆಲ್ಲರೂ ನನ್ನನ್ನು ಸಾಮಾನ್ಯ ಹುಡುಗನಂತೆ ನೋಡುತ್ತಾರೆ. ಅದನ್ನೇ ನಾನು ಕೂಡಾ ಇಷ್ಟಪಡುತ್ತೇನೆ. ಈ ಚಿತ್ರ ನನಗೆ ತುಂಬಾ ಪ್ರಿಯವಾಗಿದೆ” ಎಂದು ಅಲಿಫ್ ಚಿತ್ರದ ಬಗ್ಗೆ ಹೇಳಿದ್ದಾರೆ.
ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ ಅಲಿಫ್ ಪರೀಕ್ಷೆಯ ಅಭ್ಯಾಸದಲ್ಲಿ ನಿರತರಾಗಿದ್ದು,ಪ್ರಯಾಣ ಎಂದರೆ ಇಷ್ಟ ಪಡುವ ಅಲಿಫ್ ಗೆ ದುಬೈ ನೋಡಬೇಕು ಎನ್ನುವ ಕನಸಿದೆಯಂತೆ.
ಕ್ಯಾಂಪಸ್‌ನಲ್ಲಿ ನಡೆದ ಕಲಾ ಉತ್ಸವದ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಯೂ ಆಗಿರುವ ಜಗತ್ ತುಳಸೀಧರನ್ ಎಂಬವರು ಈ ಚಿತ್ರವನ್ನು ಕ್ಲಿಕ್ಕಿಸಿದ್ದು , ಚಿತ್ರವು ” ಸ್ನೇಹದ ಸಂಭ್ರಮ ಮತ್ತು ಸಂಕಷ್ಟಗಳನ್ನು ನಗುಮುಖದಿಂದ ಎದುರಿಸುವ ಮಾರ್ಗವಾಗಿದೆ” ಎಂದು ಪ್ರಶಂಸಿಸಲಾಗುತ್ತಿದೆ..