ಕತಾರ್: ಕತಾರ್‌ನ ಹೊಸ ಕನಿಷ್ಠ ವೇತನ ಕಾನೂನು ಮಾ.20ರ ಶನಿವಾರದಿಂದ ಜಾರಿಗೆ ಬಂದಿದ್ದು, ಇದು ಲಕ್ಷಾಂತರ ವಲಸೆ ಕಾರ್ಮಿಕರಿಗೆ ಆಶಾದಾಯಕವಾಗಿ ಪರಿಣಮಿಸಿದೆ. ಹೊಸ ಶಾಸನದ ಪ್ರಕಾರ ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ 1,000 ಕತಾರಿ ರಿಯಾಲ್ ($ 275, ಅಥವಾ19,900 ರೂಪಾಯಿ), ಒಂದು ವೇಳೆ ಉದ್ಯೋಗದಾತರು ವಸತಿ ಆಹಾರದ ನೀಡದಿದ್ದರೆ ಕನಿಷ್ಠ 300 ರಿಯಾಲ್ ಆಹಾರಕ್ಕಾಗಿ(5968 ರೂಪಾಯಿ) ಮತ್ತು ವಸತಿಗಾಗಿ 500 (9950 ರೂಪಾಯಿ) ರಿಯಾಲ್ ಗಳನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಕತಾರ್ ನಲ್ಲಿ ಜಾರಿಗೆ ತಂದಿರುವ ಹೊಸ ಶಾಸನದಿಂದ 4,00,000ಕ್ಕೂ ಹೆಚ್ಚು ಕಾರ್ಮಿಕರು ಅಥವಾ ಶೇಕಡಾ 20ರಷ್ಟು ಖಾಸಗಿ ವಲಯದವರು ಈ ಹೊಸ ಕಾನೂನಿನಿಂದ ನೇರವಾಗಿ ಅನುಕೂಲ ಪಡೆಯಲಿದ್ದಾರೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ತಿಳಿಸಿದೆ. ಕತಾರ್‌ನ ಆಡಳಿತ ಅಭಿವೃದ್ಧಿ, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕ ಸುಧಾರಣೆಗಳ ಸರಣಿಯನ್ನು ಜಾರಿಗೆ ತಂದಿದೆ.
ಆಗಸ್ಟ್ 2020 ರಲ್ಲಿ, ಕತಾರ್ ಉದ್ಯೋಗವನ್ನು ಬದಲಾಯಿಸಲು ಉದ್ಯೋಗದಾತರ ಒಪ್ಪಿಗೆಯ ಅಗತ್ಯವಿರುವ ನಿಯಮವನ್ನು ರದ್ದುಗೊಳಿಸಿತು. ಈ ಹಿಂದೆ ಕತಾರ್‌ನ “ಕಫಾಲಾ” ಅಥವಾ ಪ್ರಾಯೋಜಕತ್ವ, ವ್ಯವಸ್ಥೆಯಡಿಯಲ್ಲಿ, ವಲಸೆ ಕಾರ್ಮಿಕರು ಉದ್ಯೋಗಗಳನ್ನು ಬದಲಾಯಿಸುವ ಮೊದಲು ತಮ್ಮ ಉದ್ಯೋಗದಾತರ ಅನುಮತಿಯನ್ನು ಪಡೆಯಬೇಕಾಗಿತ್ತು.
ಕತಾರ್‌ನ ಒಟ್ಟು ಜನಸಂಖ್ಯೆ 27 ಲಕ್ಷ. ಆದರೆ ಅದರಲ್ಲಿ ಅಲ್ಲಿನ ನಾಗರಿಕರು ಎಂದಿರುವುದು ಕೇವಲ 3,00,000 ಮಾತ್ರ. ಕತಾರ್ ಸರ್ಕಾರದ ಮಾಹಿತಿಯ ಪ್ರಕಾರ, ಈಗಾಗಲೇ 5000ಕ್ಕೂ ಹೆಚ್ಚು ಕಂಪೆನಿಗಳು ಹೊಸ ವೇತನ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಹೊಸ ಕಾನೂನು ಜಾರಿಗೆ ಬದ್ಧವಾಗಿದ್ದಾರೆ.