ಸುಳ್ಯ: ಪೆರಾಜೆ ಗ್ರಾಮದ ನಿಡ್ಯಮಲೆಯಲ್ಲಿ ಹಳೆ ಮನೆಯ ಗೋಡೆ ಕೆಡವುತ್ತಿದ್ದಾಗ ಗೋಡೆಯು ಮೈಮೇಲೆ ಬಿದ್ದು ಮನೆಯ ಯಜಮಾನ ಸಾವನ್ನಪ್ಪಿರುವ ಘಟನೆ ಎ.19 ರಂದು ನಡೆದಿದೆ.
ನಿಡ್ಯಮಲೆಯ ನಾಗಪ್ಪ ನಾಯ್ಕ ಮೃತಪಟ್ಟವರು.
ಹಳೆ ಮನೆಯ ಗೋಡೆಯನ್ನು ನಾಗಪ್ಪ ಅವರು ತಮ್ಮ ಪುತ್ರ ದರ್ಶನ್ ಜೊತೆಗೂಡಿ ಕೆಡವುತ್ತಿದ್ದರು. ಈ ವೇಳೆ ಏಕಾಏಕಿ ಜರಿದ ಗೋಡೆ ಜರಿಯತೊಡಗಿದೆ. ಇದನ್ನು ಗಮನಿಸಿದ ನಾಗಪ್ಪ ಅವರು ತತ್‌ಕ್ಷಣ ಹಿಂದಕ್ಕೆ ಸರಿಯಲೆತ್ನಿಸಿದರಾದರೂ ಅಷ್ಟರಲ್ಲಾಗಲೇ ಗೋಡೆ ನಾಗಪ್ಪ ನಾಯ್ಕ ಅವರ ಮೇಲೆ ಬಿದ್ದಿದೆ. ಇದರಿಂದ ಅವರ ಅರ್ಧ ದೇಹ ಮಣ್ಣಿನೊಳಗೆ ಸಿಲುಕಿಕೊಂಡಿತು. ತತ್‌ಕ್ಷಣ ಮನೆಯವರು ಮಣ್ಣು ಹೊರತೆಗೆದು ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗೆ ನಾಗಪ್ಪ ನಾಯ್ಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ರೇವತಿ, ಪುತ್ರ ದರ್ಶನ್, ಪುತ್ರಿ ಧನ್ಯಾಶ್ರೀಯನ್ನು ಅಗಲಿದ್ದಾರೆ.