ನವದೆಹಲಿ : ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಲದ ಮೇಲಿನ ಕಂತು ಪಾವತಿಯಿಂದ ಸಾಲಗಾರರಿಗೆ ವಿನಾಯಿತಿ ನೀಡುವಂತೆ ಸಂಸ್ಥೆಗಳಿಗೆ ಸೂಚಿಸಿದ್ದು ಸಾಲಗಾರರು ಪಾವತಿಸಲಾಗದ ಇಎಂಐಗಳಿಗೆ ಸಂಬಂಧಿಸಿದಂತೆ ಬಡ್ಡಿ ಮೇಲಿನ ಬಡ್ಡಿಯನ್ನು ಹಾಕುವಂತಿಲ್ಲ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಸಾಲ ವಿನಾಯಿತಿ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ ನೀಡಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಎದುರಾದ ಸಂಕಷ್ಟದ ಸಂದರ್ಭ ಮಾರ್ಚ್ 1, 2020ರಿಂದ ಮೇ 31, 2020 ಹಾಗೂ ಆನಂತರ ಆಗಸ್ಟ್ 31, 2020ರವರೆಗೆ ಸಾಲದ ಮೇಲಿನ ಕಂತು ಪಾವತಿಯಿಂದ ಸಾಲಗಾರರಿಗೆ ವಿನಾಯಿತಿ ನೀಡುವಂತೆ ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿತ್ತು. ಈ ಬಗ್ಗೆ ಇಂದು ಸುಪ್ರೀಂ ತೀರ್ಪು ನೀಡಿದ್ದು, ”ಸಾಲದ ಮೊತ್ತ ಎಷ್ಟೇ ಆದರೂ ಈ ಸಾಲ ವಿನಾಯತಿ ಅವಧಿಯಲ್ಲಿ ಬಡ್ಡಿಯ ಮೇಲೆ ಬಡ್ಡಿ ಹಾಕುವಂತಿಲ್ಲ. ಈಗಾಗಲೇ ಚಕ್ರಬಡ್ಡಿಯಾಗಿ ಸಂಗ್ರಹಿಸಿದ್ದರೆ ಆ ಮೊತ್ತವನ್ನು ಸಾಲಗಾರನಿಗೆ ಮರುಪಾವತಿ ಮಾಡುವ ಬದಲು ಪಾವತಿಸಬೇಕಾದ ಮುಂದಿನ ಕಂತಿಗೆ ಹೊಂದಿಸಬಹುದು” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
”ಈ ವಿನಾಯತಿ ಅವಧಿಯಲ್ಲಿ ಬಡ್ಡಿಯ ಮೇಲಿನ ಹೆಚ್ಚುವರಿ ಬಡ್ಡಿ ಅಥವಾ ದಂಡದ ಬಡ್ಡಿ ಇರಬಾರದು. ಹಾಗೆ ಪಡೆದಿದ್ದರೆ ಆ ಮೊತ್ತವನ್ನು ಸಾಲದ ಮೊತ್ತದ ಮುಂದಿನ ಕಂತಿನಲ್ಲಿ ಹೊಂದಿಸುವ ಮೂಲಕ ಅದನ್ನು ಮರುಪಾವತಿಸಬೇಕು” ಎಂದು ನ್ಯಾಯಾಲಯವು ತೀರ್ಪು ನೀಡಿದೆ .’ಸಾಲ ವಿನಾಯಿತಿ ಸಂದರ್ಭದ ಒಟ್ಟು ಬಡ್ಡಿಯನ್ನು ಮನ್ನಾ ಮಾಡಲಾಗದು. ವಿನಾಯಿತಿ ಅವಧಿಯನ್ನು ವಿಸ್ತರಿಸಲಾಗದು” ಎಂದು ಕೂಡಾ ಸುಪ್ರೀಂ ಕೋರ್ಟ್ ತಿಳಿಸಿದೆ.