ಬೆಂಗಳೂರು: ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಧರ್ಮ ಯುದ್ಧ ಆರಂಭವಾಗಿದ್ದು, ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಈ ಹಿಂದೆ ಘೋಷಿಸಿದಂತೆ ಹಿಂದೂ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ, ಸುಪ್ರಭಾತ, ಓಂಕಾರ ಸದ್ದು ಮೊಗಳಿದ್ದು, ಹಲವು ಜಿಲ್ಲೆಗಳಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ.

ಮಸೀದಿ ಮೇಲಿನ ಮೈಕ್ ತೆರವಿಗೆ ಆಗ್ರಹಿಸಿ ಶ್ರೀರಾಮ ಸೇನೆ ಸಂಘಟನೆಯ ಪ್ರಮೋದ್ ಮುತಾಲಿಕ್ ಕರೆಕೊಟ್ಟಿದ್ದರು. ಅಜಾನ್ ಧ್ವನಿ ವರ್ಧಕ ತೆಗೆಯದಿದ್ದರೇ ನಾವು ಸುಪ್ರಭಾತ ಹಾಗೂ ಭಜನಾ ಅಭಿಯಾನ ಶುರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದರಂತೆ ಇಂದು ಬೆಳಂಬೆಳಗ್ಗೆ ವಿಜಯಪುರದ ಜಮಖಂಡಿ ರಸ್ತೆಯಲ್ಲಿರೋ ಮರಡಿ ಬಸವೇಶ್ವರ ದೇವಸ್ಥಾನ, ಮೈಸೂರಿನ ಶಿವರಾಂಪೇಟೆಯಲ್ಲಿರೋ ಆಂಜನೇಯ ದೇಗುಲ, ಗದಗನಲ್ಲಿ ಸುಮಾರು 16 ದೇವಸ್ಥಾನ, ಯಾದಗಿರಿ ನಗರದ ಬಸವೇಶ್ವರ ಮಂದಿರ, ಚಿಕ್ಕಮಗಳೂರು ನಗರದ ಕೊಂಗನಾಟಮ್ಮ ದೇವಸ್ಥಾನ, ಧಾರವಾಡದ ಧಾರವಾಡದ ಕಾಕರ ಮಸೀದಿ ಬಳಿಯ ರಾಮ ಮಂದಿರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ದೇವಸ್ಥಾನಗಳಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸುಪ್ರಭಾತ, ಭಕ್ತಿ ಗೀತೆ ಹಾಗೂ ವಿದ್ಯುತ್ ಚಾಲಿತ ವಾದ್ಯ ಮೊಳಗಿಸಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುಪ್ರಭಾತ ಪಠಣ ಮಾಡಿದ ಬಳಿಕ ಮಾತನಾಡಿದ ಮುತಾಲಿಕ್, ಸುಪ್ರಭಾತ ಪಠಣದಿಂದ ಜನಸಾಮಾನ್ಯರಿಗೆ ಕಿರಿಕಿರಿಯಾಗಲ್ಲ. ಕಿರಿಕಿರಿ ಆಗುತ್ತಿರೋದು ಮಸೀದಿಯ ಧ್ವನಿ ವರ್ಧಕದ ಮೂಲಕ. ಹೀಗಾಗಿಯೇ ಅವರಿಗೆ ಧ್ವನಿವರ್ಧಕದ ಮೂಲಕವೇ ಉತ್ತರ ಕೊಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಅಲ್ಲದೇ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಮೈಕ್ ನಿಷೇಧಿಸಬೇಕು. ಸುಪ್ರಿಂಕೋರ್ಟ್ ಆದೇಶವನ್ನ ರಾಜ್ಯ ಸರ್ಕಾರವೂ ಪಾಲಿಸಬೇಕು. ಸರ್ಕಾರ ದೇವಾಲಯಗಳಿಗೆ ನೋಟೀಸ್ ಕೊಟ್ಟರೆ ನಾವು ಎಲ್ಲಾ ಜಿಲ್ಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೇ ಕೇಸ್ ಹಾಕ್ತೀವಿ ಎಂದರು.

ರೂಲ್ಸ್ ಬ್ರೇಕ್ ಮಾಡಿದ್ರೆ ಕಾನೂನು ಕ್ರಮ..
ಮಸೀದಿ ಮಂದಿರಗಳ ಮೇಲೆ ನಿಗದಿತ ಡಿಸಿಬಲ್ ಧ್ವನಿ ವರ್ದಕ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಆಕಸ್ಮಾತ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ ಅಂತ ಯಾದಗಿರಿ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಯಾದಗಿರಯಲ್ಲಿ ಮಾತನಾಡಿದ ಅವ್ರು. ಈಗಾಗಲೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಉಲ್ಲಂಘಣೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಯಾರೂ ಕೂಡ ಆದೇಶ ಮೀರದಂತೆ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ಸಲಹೆ ನೀಡಿದ್ದಾರೆ.

ಪ್ರತಿಯೊಬ್ಬರು ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು:
ಇನ್ನು, ವಿವಾದದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು, ದೇವಸ್ಥಾನ ಆಗಲಿ, ಮಸೀದಿ ಆಗಲಿ ಯಾರೇ ಆಗಲಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕು. ಯಾರು ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡಿದ್ರೆ ಕಾನೂನು ಕ್ರಮ ತಗೋತೀವಿ. ಯಾರೋ ಕಳ್ಳತನ ಮಾಡ್ತಾರೆ ಅಂತ ನಾವು ಮಾಡ್ತೀವಿ ಅನ್ನೋದು ಸರಿಯಲ್ಲ. ಯಾರೇ ಆದರು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲೇಬೇಕು. ಇಲ್ಲದೆ ಇದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಎಚ್ಚರಿಕೆ ನೀಡಿದರು.