ಪುತ್ತೂರು: ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟ ಮಂಗಳೂರು ಪೊಲೀಸ್ ಕ್ರೀಡಾಂಗಣದಲ್ಲಿ ಮಾ.೧೫ರಂದು ನಡೆಯಿತು. ವಿವಿಧ ಆಟೋಟಗಳು ನಡೆದು ಪುರುಷರ ವಿಭಾಗದ ಚಾಂಪಿಯನ್ ಆಗಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ರಾಧಕೃಷ್ಣ ಗೌಡ, ಮಹಿಳಾ ವಿಭಾಗದಲ್ಲಿ ವನಿತಾರವರು ಪ್ರಶಸ್ತಿ ಪಡೆದರು. ತಂಡ ಪ್ರಶಸ್ತಿ ಡಿ.ಎ.ಆರ್/ಡಿ.ಪಿ.ಓ ತಂಡದ ಪಾಲಾಯಿತು. ರಾಧಕೃಷ್ಣ ರವರು ಕಳೆದ ವರ್ಷ ನಡೆದ ಕ್ರೀಡಾ ಕೂಟದಲ್ಲಿ ಚಾಂಪಿಯನ್ ಆಗಿದ್ದರು. ಈ ಹಿಂದೆ ನಡೆದ ರಾಜ್ಯ ಮಟ್ಟದ ಪೋಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಪುತ್ತೂರು ಸಂಚಾರ ಠಾಣೆಯ ರಾಧಕೃಷ್ಣ ಅವರು ೧೦೦,೨೦೦ ಮೀ. ಓಟದಲ್ಲಿ ಪ್ರಥಮ, ಲಾಂಗ್ ಜಂಪ್ ಮತ್ತು ತ್ರಿಬಲ್ ಜಂಪ್‌ನಲ್ಲಿ ದ್ವಿತೀಯ ಹಾಗೂ ೪೦೦ಮೀ. ರಿಲೆಯಲ್ಲಿ ಎರಡನೇ ಸ್ಥಾನ, ವಾಲಿಬಾಲ್‌ನಲ್ಲಿ ಪ್ರಥಮ, ಕಬಡಿಯಲ್ಲಿ ದ್ವೀತಿಯ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ದೇವಜ್ಯೋತಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಂ.ಲಕ್ಷ್ಮೀಪ್ರಸಾದ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು. ಡಿ.ಎ.ಆರ್ ಘಟಕದ ಪೊಲೀಸ್ ನಿರೀಕ್ಷಕರಾದ ನಾರಾಯಣ ಪೂಜಾರಿ, ಜಿಲ್ಲೆಯ ಪೊಲೀಸ್ ಉಪಅಧೀಕ್ಷಕರುಗಳು, ನಿರೀಕ್ಷಕರುಗಳು, ಉಪ ನಿರೀಕ್ಷಕರುಗಳು ಉಪಸ್ಥಿತರಿದ್ದರು. ಬಳಿಕ ಪೊಲೀಸ್ ಸಿಬ್ಬಂದಿಗಳಿಂದ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್, ಕರ್ನಾಟಕ ವೈಭವ, ಶ್ವೇತಾ ಕುಮಾರಿ ಛದ್ಮವೇಷ ನಡೆಯಿತು.
ಛದ್ಮವೇಷ ಸ್ಪರ್ಧಾ ಕಾರ್ಯಕ್ರಮವನ್ನು ಖುದ್ದಾಗಿ ವೀಕ್ಷಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್‌ರವರು ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಸಶಸ್ತ್ರ ಮೀಸಲು ವಿಶೇಷ ಪಡೆ ಮಂಗಳೂರು, ಸುಳ್ಯ ವೃತ್ತ ಪುತ್ತೂರು ವೃತ್ತ ಬಂಟ್ವಾಳ, ಬೆಳ್ತಂಗಡಿ ವೃತ್ತದ ಪೊಲೀಸರು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.