ಮಂಗಳೂರು : ಹಿಂಬಾಗಿಲಿನಿಂದ ಮನೆಗೆ ನುಗ್ಗಿದ ದರೋಡೆಕೋರರು ಚಾಕು ತೋರಿಸಿ ಬೆದರಿಸಿ, ಹಣದೊಂದಿಗೆ ಪರಾರಿಯಾದ ಘಟನೆ ಹಳೆಯಂಗಡಿಯ ಕೊಪ್ಪಳದಲ್ಲಿ ನಡೆದಿದೆ. ಹಳೆಯಂಗಡಿಯ ಕೊಪ್ಪಳ ಬಳಿಯ ಪದ್ಮನಾಭ ಸನಿಲ್ ರವರು ಮನೆಯಲ್ಲಿ ಒಬ್ಬಂಟಿಯಾಗಿದ್ದು, ಪತ್ನಿ ಹಾಗೂ ವೈದ್ಯೆ ಮಗಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಇದನ್ನು ತಿಳಿದುಕೊಂಡೇ ಇಬ್ಬರು ದರೋಡೆಕೋರರು ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ ಅಡುಗೆ ಕೋಣೆಯಲ್ಲಿದ್ದ ಚಾಕು ತೆಗೆದುಕೊಂಡು ನಾವಿಬ್ಬರೇ ಇರುವುದಲ್ಲ, ನಮ್ಮ ಬಳಿ ಇನ್ನೂ 8 ಜನರು ಇದ್ದಾರೆ ಎಂದು ಪದ್ಮನಾಭ ರವರನ್ನು ಚಿನ್ನ, ನಗದು ಕೊಡಬೇಕು ಎಂದು ಚೂರಿ ತೋರಿಸಿ ಬೆದರಿಸಿದ್ದಾರೆ.
ಆಗ ಧೈರ್ಯದಿಂದಲೇ ಅವರಿಗೆ ಉತ್ತರಿಸಿದ ಪದ್ಮನಾಭರು, ತನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಆದರೆ, ಆ ಖದೀಮರು ಮತ್ತೆ ಹಣಕ್ಕಾಗಿ ಬೆದರಿಸಿದಾಗ ಅವರಿಗೆ ಹಳೆಯಂಗಡಿ ಕೆನರಾ ಬ್ಯಾಂಕಿನ ಚೆಕ್ ನಲ್ಲಿ 3000 ರೂ. ಬರೆದು ಅಮಾನ್ಯ ರುಜು ಮಾಡಿ ನೀಡಿದ್ದಾರೆ. ಈ ನಡುವೆ ಮನೆಯೊಳಗೆ ಬಂದ ದುಷ್ಕರ್ಮಿಗಳು ಮನೆಯನ್ನು ಹಣಕ್ಕಾಗಿ ಜಾಲಾಡಿದ್ದು ಟೇಬಲ್ ನಲ್ಲಿ ಸಣ್ಣ ಚೆಂಬು ಒಳಗಡೆ ತೆಂಗಿನಕಾಯಿ ಮುಚ್ಚಿ ಜುಮಾದಿ ದೈವಕ್ಕೆಂದು ಇಟ್ಟಿದ್ದ ಮೂರೂವರೆ ಸಾವಿರ ರೂ.ದೋಚಿದ್ದಾರೆ.
ಈ ಖದೀಮರು ಉತ್ತರ ಕನ್ನಡ ಭಾಷೆ ಮಾತನಾಡುತ್ತಿದ್ದು, ಯಾರೋ ಗೊತ್ತಿದ್ದವರೇ ಸಂಚು ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪದ್ಮನಾಭ ಸನಿಲ್ ನಿವೃತ್ತ ಓರಿಯೆಂಟಲ್ ಬ್ಯಾಂಕ್ ಅಧಿಕಾರಿಯಾಗಿದ್ದು, ಕಳೆದ ನಾಲ್ಕು ವರ್ಷದ ಹಿಂದೆ ಕಾಲು ಆಪರೇಷನ್ ಆಗಿದ್ದು, ಅನಾರೋಗ್ಯದಿಂದಲೂ ಬಳಲುತ್ತಿದ್ದಾರೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.