ಪುತ್ತೂರು: ಗಾಂಜಾ ಆರೋಪಿಗಳ ತನಿಖೆ ವೇಳೆ ನೀಡಿದ ಮಾಹಿತಿಯನುಸಾರ, ಗಾಂಜಾ ಸರಬರಾಜುದಾರರನ್ನು ಪುತ್ತೂರು ನಗರ ಠಾಣೆ ಪೊಲೀಸರು ಬೆನ್ನಟ್ಟಿ ಮಾಲು ಸಹಿತ ಬಂಧಿಸಿದ್ದು, ಈ ವೇಳೆ ಆರೋಪಿ ಬಳಿ ಪಿಸ್ತೂಲ್ ಹಾಗೂ ಸಜೀವ ಗುಂಡು ಪತ್ತೆಯಾಗಿದೆ.
ಬಂಧಿತ ಆರೋಪಿಯನ್ನು ವಿಟ್ಲ ಕುಂಡಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ ಮುವಾಝ್, ಶಫೀಕ್ ಕೆ. ವಿ. ಎನ್ನಲಾಗಿದೆ.

ಮೇ 22 ರಂದು ಸಂಜೆ ವೇಳೆ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ಬಂಧಿಸಲಾಗಿದೆ. ಬಂಧಿತನಿಂದ ಕಾರು, ಗಾಂಜಾ ಸೇರಿದಂತೆ ಸುಮಾರು ರೂ. 5.86 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೇ.22 ರಂದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಬಳಿ ಪುತ್ತೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆ ಉಮ್ಮರಬ್ಬ ಎಂಬವರ ಪುತ್ರ ಶಫೀಕ್ ಕೆ.ವಿ(24 ವ) ಮತ್ತು ಕುಂತೂರು ಎರ್ಮಲ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ರಾಝೀಕ್(28ವ)ಬಂಧಿಸಲ್ಪಟ್ಟ ಆರೋಪಿಗಳು.
ಶಫೀಕ್ ಹಾಗೂ ರಾಝೀಕ್ ರವರು ವೀರಮಂಗಲ ರೈಲ್ವೇ ಹಳಿ ಬಳಿ ಗಾಂಜಾ ಇರುವ ಬ್ಯಾಗ್ ಹಿಡಿದು ನಿಂತಿದ್ದು ಈ ಬಗ್ಗೆ ಖಚಿತ ಮಾಹಿತಿ ದೊರೆತಿದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಇವರ ವಿಚಾರಣೆ ವೇಳೆ ಇವರ ಸ್ನೇಹಿತನಾದ ಮಹಮ್ಮದ್ ಮುವಾಝ್(3೦) ಎಂಬಾತ ಇವರಿಗೆ ಗಾಂಜಾ ಸರಬರಾಜು ಮಾಡುವ ಮಾಹಿತಿ ದೊರೆತಿದೆ.
ಮಹಮ್ಮದ್ ಮುವಾಝ್ ಮಂಗಳೂರಿನಿಂದ ಗಾಂಜಾ ಖರೀದಿಸಿ ಆರೋಪಿಗಳಿಗೆ ಮಾರಲು ಕಾರಿನಲ್ಲಿ ವೀರಮಂಗಲಕ್ಕೆ ಬರುತ್ತಿದ್ದ ಮಾಹಿತಿ ಪಡೆದ ಪೊಲೀಸರು, ಆರೋಪಿಗಳ ಮೂಲಕ ಕೆದಿಲ ಗ್ರಾಮದ ಪೇರಮೊಗ್ರು ಸಮೀಪ ಆತನನ್ನು ಬರುವಂತೆ ಮಾಡಿ ಅಲ್ಲಿ ತಡೆದಿದ್ದಾರೆ. ಈ ವೇಳೆ ಮುವಾಝ್ ಕಾರು ನಿಲ್ಲಿಸಿ ಪರಾರಿಯಾಗುತ್ತಿದ್ದಂತೆ ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧನದ ಬಳಿಕ ಪರಿಶೀಲನೆ ವೇಳೆ ಆರೋಪಿ ಮಹಮ್ಮದ್ ಮುವಾಝ್ ನ ಪ್ಯಾಂಟ್ ಕಿಸೆಯಲ್ಲಿ ಪರವಾನಿಗೆ ರಹಿತ ರೂ 50 ಸಾವಿರ ಮೌಲ್ಯದ ಪಿಸ್ತೂಲ್ ಮತ್ತು ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ. ಕಾರಿನ ಡಿಕ್ಕಿಯಯಲ್ಲಿ ಸುಮಾರು 2 ಕೆ.ಜಿ ಗಾಂಜಾ, ಗಾಂಜಾ ತುಂಬಿದ 50ಗ್ರಾಂ ತೂಕದ 5 ಪ್ಯಾಕೆಟ್, ರೂ. 330 ನಗದು, ಪಾನ್ ಕಾರ್ಡ್, 11 ಎಟಿಎಂ ಕಾರ್ಡ್ ಗಳು, ಮೊಬೈಲ್ ಪೋನ್ , ಪಿಸ್ತೂಲ್ ಮಾದರಿಯ ಸಿಗರ್ ಲೈಟ್, ಮಾತ್ರೆಗಳು ಸಿಕ್ಕಿವೆ . ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಐ 20 ಕಾರು ಸೇರಿದಂತೆ ಒಟ್ಟು ರೂ. 5,86,530 ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ರಾಜೇಶ್,ಕೆ.ಪಿರವರ ಮಾರ್ಗದರ್ಶನದಂತೆ ಪೊಲೀಸ್ ಉಪ ನಿರೀಕ್ಷಕರಾದ ನಸೀನ್ ತಾಜ್ ಚಟ್ಟರಕಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಗದೀಶ್ ಕಿರಣ್, ಚೋಳಪ್ಪ, ರೇವತಿ, ಉದಯ ಕುಮಾರ್, ಶ್ರೀಧರ್, ಬಸವರಾಜ್, ಗೀತಾ, ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.