ಪುತ್ತೂರು: ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮತ್ತು ಮೆರವಣಿಗೆಗೆ ಧ್ವನಿವರ್ಧಕ ಬಳಸುವ ವಿಚಾರವಾಗಿ ಹಾಗೂ ಧ್ವನಿವರ್ಧಕ ಶಬ್ಧ ಮಿತಿ ಪಾಲನೆಯ ಕುರಿತು ಸಂಪ್ಯ ಠಾಣೆಯಲ್ಲಿ ಠಾಣಾ ವ್ಯಾಪ್ತಿಯ ದೇವಸ್ಥಾನ, ಭಜನಾಮಂದಿರ, ಮಸೀದಿಗಳ ಸಹಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಧಾರ್ಮಿಕ ಪ್ರಮುಖರ ಸಭೆ ಮೇ.23ರಂದು ಸಂಪ್ಯ ಠಾಣಾ ಎಸ್‌ಐ ಉದಯರವಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಿತ್ಯ ಧ್ವನಿ ವರ್ಧಕ ಬಳಸುವ ಹಾಗೂ ಮೆರವಣಿಗೆಗಳಿಗೆ ಧ್ವನಿವರ್ಧಕ ಬಳಸುವ ಕುರಿತು ಮಾಹಿತಿ ನೀಡಿದ ಸಂಪ್ಯ ಠಾಣೆಯ ಎಸ್‌ಐ ಅವರು, ಮಸೀದಿ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ನಿತ್ಯ ಧ್ವನಿವರ್ಧಕ ಬಳಸುವವರು ಸರ್ಕಾರದ ಆದೇಶದಂತೆ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವುದು ಹಾಗೂ ಆದೇಶದಲ್ಲಿ ಸೂಚಿಸಿರುವಂತೆ ಶಬ್ಧ ಮಿತಿ ಪಾಲಿಸುವುದು ಕಡ್ಡಾಯವಾಗಿದೆ. ಬೆಳಿಗ್ಗೆ ಗಂಟೆ 6ರಿಂದ ರಾತ್ರಿ 10ರ ತನಕ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ. ಸಂಬಂಧಪಟ್ಟ ಧಾರ್ಮಿಕ ಕೇಂದ್ರಗಳ ಸಂಘಟಕರು 15 ದಿವಸದೊಳಗೆ ಧ್ವನಿವರ್ಧಕ ಬಳಕೆಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದರು.

ಪ್ರಸ್ತುತ ಸರ್ಕಾರದ ಆದೇಶದಂತೆ,ಅನುಮತಿ ಪಡೆದುಕೊಂಡವರು ಬೆಳಿಗ್ಗೆ ಗಂಟೆ 6ರಿಂದ ರಾತ್ರಿ 10ರ ತನಕ 55 ಡೆಸಿಬ್ಲೂ ಶಬ್ಧ ಮಿತಿಯೊಂದಿಗೆ ಮಾತ್ರ ಧ್ವನಿವರ್ಧಕ ಬಳಸಬಹುದಾಗಿದೆ. ಅರ್ಜಿ ನಮೂನೆ ಠಾಣೆಯಲ್ಲೇ ಲಭ್ಯವಿದ್ದು,ಅರ್ಜಿಯನ್ನು ಭರ್ತಿ ಮಾಡಿ ಠಾಣೆಯಲ್ಲೇ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಡಿವೈಎಸ್ಪಿ ಅವರಿಂದ ಅನುಮತಿ ನೀಡುವ ಪ್ರಕ್ರಿಯೆ ನಡೆಯಲಿದೆ.ಪ್ರಸ್ತುತ ಧ್ವನಿವರ್ಧಕ ಬಳಸಿಕೊಂಡು ಇದ್ದವರ ಪೈಕಿ ಅನುಮತಿ ಪಡೆದುಕೊಳ್ಳಲು ಇಚ್ಚಿಸದವರು ಸ್ವತಹಃ ತಾವಾಗಿಯೇ ಧ್ವನಿವರ್ಧಕ ತೆರವು ಮಾಡಬಹುದಾಗಿದೆ ಎಂದರು.
ಪರವಾನಿಗೆ ಪಡೆದುಕೊಂಡ ಬಳಿಕ ಶಬ್ಧ ಮಿತಿ ಪಾಲನೆ ಕಡ್ಡಾಯವಾಗಿದೆ.ಸಂಬಂಧಪಟ್ಟ ಎಲೆಕ್ಟ್ರೀಷಿಯನ್ ತಜ್ಞರ ಮೂಲಕ ಪರಿಶೀಲನೆ ಕಾರ್ಯ ಇಲಾಖೆಯಿಂದ ನಡೆಯಲಿದೆ. ಅನುಮತಿಯ ನಿಯಮಗಳ ಪಾಲನೆಯಾಗದಿದ್ದಲ್ಲಿ ಇಲಾಖೆಯಿಂದ ತೆರವುಗೊಳಿಸುವ ಕಾನೂನು ಕ್ರಮವೂ ಇರಲಿದೆ ಎಂದು ಅವರು ತಿಳಿಸಿದರು.

ವಿವಿಧ ಧಾರ್ಮಿಕ ಕೇಂದ್ರಗಳ ಪ್ರಮುಖರಾದ ಶಶಿಧರ್ ರಾವ್ ಬೊಳಿಕ್ಕಳ, ಸುಧಾಕರ್ ರಾವ್ ಆರ್ಯಾಪು, ರವಿರಾಜ್ ರೈ ಸಜಂಕಾಡಿ, ಅಬ್ದುಲ್ ಅಜೀಝ್ ಕಾವು, ಅಬ್ದುಲ್ ಖಾದರ್ ಮೇರ್ಲ, ಎಂ.ಕೆ ಮಹಮ್ಮದ್, ಇಸ್ಮಾಯಿಲ್ ಎನ್.ಪಿ, ಯೂಸುಫ್ ಬೆದ್ರ, ಪ್ರದೀಪ್‌ಕೃಷ್ಣ ಬಂಗಾರಡ್ಕ, ಮೂಸಕುಂಞಿ ರೆಂಜ, ಪ್ರಕಾಶ್ ರೈ ಇರ್ದೆ, ಶಾಫಿ ಅಜ್ಜಿಕಟ್ಟೆ, ವಿನ್ಯಾಸ್ ಯು.ಎಸ್, ಮುಸ್ತಾಫ ಅಜ್ಜಿಕಟ್ಟೆ,ಕೆ.ಕೆ.ಇಬ್ರಾಹಿಂ ಹಾಜಿ, ಮಹಮ್ಮದ್ ಫಾರೂಕ್, ಅವಿನಾಶ್ ರೈ, ಹಂಝ ಎಂ, ಅದ್ರಮ ಪಿ, ಅಬ್ದುಲ್ ಮಜೀದ್, ಸಂತೋಷ್ ಆಳ್ವ, ಎ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಠಾಣೆಯ ಸಿಬ್ಬಂದಿ ಪ್ರವೀಣ್ ರೈ ಸ್ವಾಗತಿಸಿ, ವಂದಿಸಿದರು.

