ವಿಟ್ಲ: ಒಡಿಯೂರು ಶ್ರೀಗುರುದೇವ ಜ್ಞಾನ ಮಂದಿರದಲ್ಲಿ ಆ.8 ರಂದು ನಡೆಯುವ ಒಡಿಯೂರು ಗ್ರಾಮೋತ್ಸವ – 2022ರ ಪೂರ್ವಭಾವಿ ಸಭೆ ಮೇ.27 ರಂದು ನಡೆಯಿತು.
ಈ ವೇಳೆ ಆಶೀರ್ವಚನ ನೀಡಿದಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಮಾಜಮುಖಿ ಕಾರ್ಯಗಳು ಗ್ರಾಮೋತ್ಸವದ ಮೂಲಕ ಆಗಬೇಕಾಗಿದೆ. ಬದುಕು ಕೌಶಾಲ್ಯಾಧಾರಿತವಾಗಿರಬೇಕು. ಗುಣಾತ್ಮಕ ಹಾಗೂ ಋಣಾತ್ಮಕ ಪಟ್ಟಿ ಜೀವನದಲ್ಲಿ ಮಾಡಬೇಕು. ಜೀವನದಲ್ಲಿ ಬದಲಾವಣೆ ಅತೀ ಅಗತ್ಯ. ವಿಶ್ವದಲ್ಲಿ ಶಾಶ್ವತವಾದುದು ಯಾವುದೂ ಇಲ್ಲ.ಆಧ್ಯಾತ್ಮ ದ ಬದುಕಿಗೆ ನಮ್ಮನ್ನು ತೊಡಗಿಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಸಮಸ್ಯೆ ಸೃಷ್ಠಿಯ ಮೂಲ ನಾವೇ. ಅನುಭವವೇ ಮಹಾಗುರು. ತಾಳ್ಮೆ ಸಹನೆ ಇದ್ದರೆ ಬದುಕು ಹಸನಾಗುತ್ತದೆ. ತಾಳ್ಮೆ ಸಹನೆಯ ಗುಣವನ್ನು ಆಭರಣವಾಗಿಸೋಣ. ಎಲ್ಲರನ್ನು ಅರಿತು ಬಾಳುವ ಬದುಕು ನಮ್ಮದಾಗಬೇಕು ಎಂದು ಹೇಳಿದರು.

ಸಾಧ್ವಿ ಶ್ರೀ ಮಾತಾನಂದಮಯಿ ರವರು ಆಶೀರ್ವಚನ ನೀಡಿ ನಮಗೆಲ್ಲ ಇನ್ನೊಂದು ಸಂಭ್ರಮದ ಕ್ಷಣ ಎದುರಾಗುವ ದಿನ ಸನ್ನಿಹಿತವಾಗಿದೆ. ಗುರುಸೇವೆಯಿಂದ ನಮ್ಮ ಜೀವನ ಪಾವನವಾಗುತ್ತದೆ. ರಾಷ್ಟ್ರೋತ್ತನದ ಪರಿಕಲ್ಪನೆ ಶ್ರೀಗಳಲ್ಲಿ ಇದೆ. ಎಲ್ಲರೂ ಒಟ್ಟಾಗಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ವಿವಿದೋದ್ದೇಶ ಸಹಕಾರಿಯ ಅಧ್ಯಕ್ಷ ಸುರೇಶ್ ರೈ, ಪದ್ಮನಾಭ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾಬಳಗದ ಅಧ್ಯಕ್ಷರಾದ ಅಶೋಕ್ ಕುಮಾರ್ ಬಿಜೈ, ಲೊಕನಾಥ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸದ ಯೋಜನಾಧಿಕಾರಿ ಕಿರಣ್ ಉರ್ವ, ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ವೆಂಕಟರಮಣ ಹೊಳ್ಳ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದನಾರ್ಪಣೆಗೈದರು.


























