ಮಂಗಳೂರು: ನಗರದ ಸಿ.ಟಿ.ಸೆಂಟರ್ ಬಳಿ ಪೆನ್ನುಗಳ ಮಾರಾಟ ನೆಪದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಚೈಲ್ಡ್ ಲೈನ್ -1098 ಕ್ಕೆ ಬಂದಿರುವ ಮಾಹಿತಿಯನ್ವಯ ಚೈಲ್ಡ್ ಲೈನ್ ದ.ಕ.ಜಿಲ್ಲೆಯ ತಂಡವು ಪೋಲೀಸ್ ಸಿಬ್ಬಂದಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಭಿಕ್ಷಾಟನೆ ನಡೆಸುತ್ತಿದ್ದ ಹಾವೇರಿ ಮೂಲದ ಅಪ್ರಾಪ್ತ ಬಾಲಕನನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಪುನರ್ವಸತಿಯನ್ನು ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ನಗರದಲ್ಲಿ ಇತ್ತೀಚೆಗೆ ಭಿಕ್ಷಾಟನೆ ನಿರತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬಂದಿದೆ ಇನ್ನು ಮುಂದೆಗೆ ಇಂತಹ ಮಕ್ಕಳಿಗೆ ಭಿಕ್ಷಾಟನೆ ಮಾಡದಂತೆ ಅರಿವು ನೀಡುವ ಬದಲು ನೇರವಾಗಿ ರಕ್ಷಣೆ ಮಾಡಿ ಪುನರ್ವಸತಿಯನ್ನು ಕಲ್ಪಿಸುವ ಯೊಜನೆಯನ್ನ ಹಮ್ಮಿಕೊಂಡಿದ್ದೇವೆ.
ಭಿಕ್ಷಾಟನೆ ನಿರತ ಮಕ್ಕಳು ಕಂಡುಬಂದಲ್ಲಿ ಚೈಲ್ಡ್ ಲೈನ್ -_1098ಕ್ಕೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಚೈಲ್ಡ್ ಲೈನ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಚೈಲ್ಡ್ ಲೈನ್ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಸಿಬ್ಬಂದಿಗಳಾದ ಕವನ್ ಕಬಕ, ಸ್ವಯಂ ಸೇವಕರಾದ ವಿಜಯಲಕ್ಷ್ಮಿ ಶೆಟ್ಟಿ, ದಿವ್ಯಾ ಕುರಿಯ ಹಾಗೂ ಬಂದರು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

























