ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದ ವಿವಾದಿತ ನಾಗನ ಕಟ್ಟೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನ್ ದಾಸ ಸ್ವಾಮೀಜಿ ಮೇ.31 ರಂದು ಭೇಟಿ ನೀಡಿದರು.

ದೇವಸ್ಥಾನದಲ್ಲಿ ನಾಗನ ಕಟ್ಟೆಯನ್ನು ಅವೈಜ್ಞಾನಿಕವಾಗಿ ಕಟ್ಟಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಮೇ.30 ರಂದು ಪ್ರತಿಭಟನೆಯನ್ನು ನಡೆಸಿದ್ದರು. ಈ ಹಿನ್ನೆಲೆ ಭೇಟಿ ನೀಡಿದ ಶ್ರೀಗಳು, ಈ ಕಾಮಗಾರಿಯನ್ನು ಮುಂದುವರಿಸಬಾರದು, ಈ ಕಟ್ಟೆಯಲ್ಲಿ ನಾಗ ಪ್ರತಿಷ್ಠೆಯನ್ನು ಮಾಡಬಾರದು, ಮರವನ್ನು ಕಡಿದದ್ದು ಕೂಡ ಅನರ್ಥವಾಗಿದೆ. ಹೀಗೆ ಮುಂದುವರೆದರೆ ಸಮಸ್ಯೆ ಗಂಭೀರವಾದಿತು ತಕ್ಷಣಕ್ಕೆ ಈಗ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕು ಎಂದರು.
ಕ್ಷೇತ್ರದ ತಂತ್ರಿಗಳನ್ನು ಮತ್ತು ಜ್ಯೋತಿಷ್ಯರನ್ನು ಕರೆ ತಂದು ಒಂದು ದಿನದ ತಾಂಬೂಲ ಪ್ರಶ್ನೆ ನಡೆಸಿ, ಮತ್ತೆ ಕೆಲಸವನ್ನು ಮುಂದುವರೆಸಿ ಎಂದು ಶ್ರೀಗಳು ಸಲಹೆಯನ್ನು ನೀಡಿದರು. ತಕ್ಷಣ ನಿಲ್ಲಿಸದೆ ಕಾರ್ಯ ಮುಂದುವರಿಸಿದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಎಂದರು.

ಕಟ್ಟೆಯ ಕೆಳಗೆ ಆರು ನಾಗನ ಶಿಲೆಗಳನ್ನು ಸ್ಥಾಪಿಸಿದ್ದು ಕೂಡ ತಪ್ಪಾಗಿದ್ದು, ತಕ್ಷಣಕ್ಕೆ ಈಗ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸಿ, ದೈವಜ್ಞರ ಮುಖಾಂತರ ಪ್ರಶ್ನಾಚಿಂತನೆಯನ್ನು ಮಾಡಿ, ಕ್ಷೇತ್ರದ ತಂತ್ರಿಗಳು ಮತ್ತು ವಾಸ್ತುಶಿಲ್ಪಿಯನ್ನು ಸ್ಥಳಕ್ಕೆ ಬರುವಂತೆ ಮಾಡಿ ಮತ್ತೆ ಕೆಲಸವನ್ನು ಮುಂದುವರೆಸುವಂತೆ ಸೂಚನೆ ನೀಡಿದರು.
ಈ ವೇಳೆ ಪಂಚಾಯತ್ ಅಧ್ಯಕ್ಷರಾದ ಪುಷ್ಪಾವತಿ ಗೌಡ, ಅರುಣ್ ಕುಮಾರ್ ಪುತ್ತಿಲ, ಮಾಜಿ ವ್ಯವಸ್ಥಾಪನಾ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಮಹೇಶ್ಚಂದ್ರ ಸಾಲ್ಯಾನ್, ಊರಿನ ಪ್ರಮುಖರಾದ ಪುರಂದರ ಗೌಡ ಉಪಸ್ಥಿತರಿದ್ದರು.


























