ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ಆರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ 6 ವಿದ್ಯಾರ್ಥಿನಿಯರನ್ನು ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಕಾಲೇಜಿನಲ್ಲಿ ಹಿಜಾಬ್ ಧರಿಸಬಾರದೆಂಬ ಸರಕಾರಿ ಆದೇಶ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಪದೇ ಪದೇ ಹಿಜಾಬ್ ಧರಿಸಿಕೊಂಡು ಬಂದು ತರಗತಿಯೊಳಗೆ ಪ್ರವೇಶಿಸುವ ಮೂಲಕ ಕಾಲೇಜಿನ ಕಲಿಕಾ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅವರ ಮೇಲೆ ಶಿಸ್ತು ಕ್ರಮ ಜರಗಿಸುವ ಸಲುವಾಗಿ ಅಮಾನತು ಆದೇಶ ಮಾಡಲಾಗಿದೆ.
ಜೂ.1 ರಂದು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ಕೋಮಿನ ವಿದ್ಯಾರ್ಥಿನಿಯರನ್ನು ಇನ್ನೊಂದು ಕೋಮಿನ ವಿದ್ಯಾರ್ಥಿಗಳು ಚುಡಾಯಿಸಿದಾಗ ಆಕ್ಷೇಪಿಸಿದ ವಿದ್ಯಾರ್ಥಿಗಳ ವಿರುದ್ದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಹೊಯ್ಯಿ-ಕೈ ನಡೆಸಿ ಸಂಘರ್ಷವುಂಟಾಯಿತು. ಪರಿಸ್ಥಿತಿ ಕೈ ಮೀರುವ ಲಕ್ಷಣ ಕಂಡು ಬಂದಾಗ ಕಾಲೇಜು ಪ್ರಾಂಶುಪಾಲರು ಪೊಲೀಸ್ ರಕ್ಷಣೆಯನ್ನು ಬಯಸಿದರು. ತಕ್ಷಣವೇ ಕಾಲೇಜಿಗೆ ದೌಡಾಯಿಸಿದ ಪೊಲೀಸ್ ಪಡೆ ಘರ್ಷಣೆ ನಿರತ ವಿದ್ಯಾರ್ಥಿಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.


























