ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ದಿನಗಳಿಂದ ಆರಂಭವಾದ ಹಿಜಾಬ್ ಕೇಸರಿ ನಡುವಿನ ವಿವಾದ ಹಾಗೂ ಮಾದ್ಯಮ ವರದಿಗಾರರ ಮೇಲಿನ ಹಲ್ಲೆಯ ಬೆಳವಣಿಗೆಗಳ ಬಳಿಕ ಶಾಸಕ ಸಂಜೀವ ಮಠಂದೂರು ಇಂದು ಕಾಲೇಜಿಗೆ ಭೇಟಿ ನೀಡಿ ಸಭೆ ನಡೆಸಿದರು.
ಸಭೆಯ ನಂತರ ಮಾತನಾಡಿದ ಶಾಸಕರು, ಕಾಲೇಜಿನಲ್ಲಿ ಶಿಸ್ತಿಗೆ ಚ್ಯುತಿ ತಂದ ಯಾವುದೇ ವಿದ್ಯಾರ್ಥಿಗಳನ್ನು ಕ್ಷಮಿಸಲಾಗುವುದಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಲಯದಲ್ಲಿ ಹಿಜಾಬ್ ಕುರಿತಾಗಿ ನಿಯಮಗಳನ್ನು ಪ್ರಕಟಿಸಿದ್ದು, ನಿಯಮದ ಪ್ರಕಾರ ವಿದ್ಯಾರ್ಥಿನಿಯರು ಕಾಲೇಜಿನ ರೆಸ್ಟ್ ರೂಮ್ ತನಕ ಹಿಜಾಬ್ ಧರಿಸಿಕೊಂಡು ಬರಬಹುದು, ಅಲ್ಲಿಂದ ತರಗತಿ ಬರುವಾಗ ಮತ್ತು ಕ್ಯಾಂಪಸ್ ನಲ್ಲಿ ಕಾಲೇಜಿನ ಸಮವಸ್ತ್ರವನ್ನೇ ಧರಿಸಿ ಶಾಲಾ-ಕಾಲೇಜು ಚಟುವಟಿಕೆಯಲ್ಲಿ ಭಾಗವಹಿಸಿಬೇಕು. ಅದೇ ಸಂಜೆ ಮನೆಗೆ ತೆರಳುವಾಗ ಮತ್ತೆ ರೆಸ್ಟ್ ರೂಮ್ ಗೆ ತೆರಳಿ ಹಿಜಾಬ್ ಧರಿಸಿಕೊಂಡು ಹೋಗಲು ಅನುಮತಿ ನೀಡಲಾಗಿದೆ. ಇದರ ಹೊರತಾಗಿ ಯಾವುದೇ ಸಡಿಲಿಕೆಯನ್ನು ನೀಡಲಾಗಿಲ್ಲ.
ಈ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಎಲ್ಲರೂ ಪಾಲಿಸಿಬೇಕು. ಈ ನಿಟ್ಟಿನಲ್ಲಿ ಇಂದು ಸಭೆ ನಡೆಸಲಾಗಿದ್ದು, ಪ್ರಾಂಶುಪಾಲರು, ಅಧ್ಯಾಪಕರು, ಸಿಬಿಸಿಯವರು ಒಟ್ಟಾಗಿ ಕಾಲೇಜಿನ ಅಭಿವೃದ್ಧಿಯ ಬಗ್ಗೆ, ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ, ಮುಂದಿನ ದಿನಗಳಲ್ಲಿ ಕಾಲೇಜನ್ನು ಒಂದು ಮಾದರಿ ಕಾಲೇಜನ್ನಾಗಿ ನಿರ್ಮಿಸುವ ನಿಟ್ಟಿನಿಂದ ಕೆಲ ಯೋಜನೆಗಳನ್ನು ರೂಪಿಸಿದ್ದೇವೆ. ಈ ಬಗ್ಗೆ ಸಮಗ್ರವಾದ ಚರ್ಚೆ ನಡೆಸಲಾಗಿದೆ. ಎಲ್ಲಾ ತರಗತಿ ಅಧ್ಯಾಪಕರ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ತರಗತಿಗಳಲ್ಲಿ ಶಿಸ್ತನ್ನು ಪಾಲಿಸುವ ದೃಷ್ಟಿಯಲ್ಲಿ ಈ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದರು.

ಈ ವೇಳೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆದ ಘಟನೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದವರ ಮೇಲೆ ಹಾಗೂ ನ್ಯಾಯಾಲಯದ ತೀರ್ಪು ಉಲ್ಲಂಘನೆ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.


























